ಹುಣಸೂರು, ಜುಲೈ 04, 2021 (www.justkannada.in): ಕಾಡಿನಿಂದ ನಾಡಿಗೆ ಬಂದಿದ್ದ ಮೂರು ಸಲಗಗಳು ವಾಪಾಸ್ ತೆರಳಲಾಗದೆ ತಾಲೂಕಿನ ನಾಗರಹೊಳೆ ರಸ್ತೆಯ ಹಳೇ ಪೆಂಜಹಳ್ಳಿ ಬಳಿ ಬೀಡು ಬಿಟ್ಟಿವೆ.
ರೈತರು ಸಲಗಗಳನ್ನು ಕಾಡಿಗಟ್ಟುವ ವೇಳೆ ಅಡ್ಡಾದಿಡ್ಡಿ ಓಡಾಟದಿಂದಾಗಿ ಬಾಳೆ, ಶುಂಠಿ, ಟೊಮಾಟೋ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದೆ. ಹತ್ತಾರು ಮರಗಳನ್ನು ನೆಲಕ್ಕುರುಳಿಸಿವೆ.
ನಾಗರಹೊಳೆ ಉದ್ಯಾನದಿಂದ ಶುಕ್ರವಾರ ರಾತ್ರಿ ವೀರನಹೊಸಹಳ್ಳಿ ವಲಯದಿಂದ ಹೊರ ದಾಟಿರುವ ಸಲಗಗಳು ಬೆಳೆಗಳನ್ನು ತಿಂದು ಬೆಳಗಾದರೂ ಕಾಡಿಗೆ ವಾಪಾಸ್ ಹೋಗಲಾಗದೆ ಲಕ್ಷ್ಮಣತೀರ್ಥ ನದಿಯಲ್ಲಿ ಬೀಡು ಬಿಟ್ಟಿದ್ದವು.
ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ, ಸೂಕ್ತ ಪರಿಹಾರವನ್ನೂ ಸಕಾಲದಲ್ಲಿ ನೀಡುತ್ತಿಲ್ಲ, ಪರಿಹಾರ ನೀಡಿ ಹೋಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಆರ್.ಎಫ್.ಓ. ಹಾಗೂ ಸಿಬ್ಬಂದಿಗಳಿದ್ದ ಜೀಪನ್ನು ಒಂದೂವರೆ ಗಂಟೆಗೂ ಹೆಚ್ಚು ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.