ಬೆಂಗಳೂರು,ಜುಲೈ,7,2021(www.justkannada.in): ಕರ್ನಾಟಕದ ಪಾಲಿಗೆ ಮಹತ್ವದ್ದಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅತಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ತಿಳಿಸಿದರು.
ಬುಧವಾರ ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಈ ವಾರಾಂತ್ಯದಲ್ಲಿ ಮುಖ್ಯಮಂತ್ರಿಗಳು ಕ್ರಿಯಾ ಯೋಜನೆಗೆ ಸಂಬಂಧಪಟ್ಟಂತೆ ಕಾನೂನು ತಜ್ಞ ಹಾಗೂ ತಾಂತ್ರಿಕ ಪರಿಣಿತರ ಜೊತೆ ಚರ್ಚೆ ಮಾಡಲಿದ್ದಾರೆ ಎಂದರು.
ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟಿನಲ್ಲಿ ಮಿಸಲೇನಿಯಸ್ ಅರ್ಜಿ ಮಾತ್ರ ಬಾಕಿ ಇದೆ. ಈ ಕುರಿತು ಸಿಎಂ ಈ ವಾರ ಸಭೆ ಕೈಗೊಳ್ಳಲಿದ್ದಾರೆ. ಯೋಜನೆಯ ಅನುಷ್ಠಾನಕ್ಕೆ ಯಾವ ಯಾವ ಒಪ್ಪಿಗೆ ಪಡೆಯಬೇಕು ? ಮುಂದೆ ಯಾವ ರೀತಿ ಹೋಗಬೇಕು ಎಂಬುದರ ಕುರಿತು ಕಾನೂನು ಪರಿಣಿತರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಮೇಕೆದಾಟು ಯೋಜನೆ ರಾಜ್ಯಕ್ಕೆ ಮಹತ್ವದ್ದು. ಕಾವೇರಿ ನೀರು ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸುವ ಭವಿಷ್ಯದ ಯೋಜನೆ. ಮತ್ತು ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಸಮಾನಾಂತರ ಅಣೆಕಟ್ಟು ಇದಾಗಲಿದೆ. ಆದ್ದರಿಂದ ಈ ಯೋಜನೆಯನ್ನು ಜಾರಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಈ ವಾರಾಂತ್ಯದೊಳಗೆ ಕಾನೂನು ಪಂಡಿತರ ಮತ್ತು ತಾಂತ್ರಿಕ ಪರಿಣಿತರ ಸಭೆ ಕರೆಯಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮುಂಗಾರು ಅಧಿವೇಶನದ ಬಗ್ಗೆ ಇದುವರೆಗೂ ಯಾವುದೇ ರೀತಿಯ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ಯಾರು ಇರುತ್ತಾರೆ ಯಾರೂ ಇರೋದಿಲ್ಲ ಎಂಬ ಮಾಹಿತಿ ನನ್ನ ಬಳಿ ಇಲ್ಲ. ಆದರೆ ಕರ್ನಾಟಕಕ್ಕೆ ಒಳ್ಳೆಯ ಪ್ರತಿನಿಧ್ಯತೆ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
Key words: Planning –mekedhatu-project- Decision –CM- Meeting-minister Basavaraja bommai