ಮೈಸೂರು, ಜು.15, 2019 : (www.justkannada.in news) ಜಿಲ್ಲೆಯ ಅರಸನ ಕೆರೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಪತ್ತೆಯಾಗಿರುವ ಎರಡು ಬೃಹತ್ ನಂದಿ ವಿಗ್ರಹಗಳ ಸಂರಕ್ಷಣೆಗೆ ಸರಕಾರ ಮುಂದಾಗಿದೆ.
ಮೈಸೂರು-ಎಚ್.ಡಿ.ಕೋಟೆ ಮಾರ್ಗದ ಜಯಪುರ ಬಳಿಯ ಅರಸನಕೆರೆ ಗ್ರಾಮದಲ್ಲಿ ಬೃಹತ್ ನಂದಿ ವಿಗ್ರಹಗಳು ಮಣ್ಣಿನಲ್ಲಿ ಹುದುಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಜಿಲ್ಲಾಡಳಿತ ವಿಗ್ರಹಗಳ ಸಂರಕ್ಷಣೆಗೆ ಮುಂದಾಗಿದೆ. ಈ ಸಂಬಂಧ ಸೋಮವಾರ ಉಪ ತಹಸೀಲ್ದಾರ್ ಕೆ.ಎಸ್.ಕುಬೇರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಉಪ ತಹಸೀಲ್ದಾರ್ ಕೆ.ಎಸ್.ಕುಬೇರ್ ಹೇಳಿದಿಷ್ಟು…
ಅರಸನ ಕೆರೆ ಗ್ರಾಮದ ಸರ್ವೆ ನಂಬರ್ 71 ರಲ್ಲಿ ಪತ್ತೆಯಾಗಿರುವ ಜೋಡಿ ಲಿಂಗ ಇಡುವಳಿ ಜಮೀನು. ಇದು ಸ್ಥಳೀಯ ಗ್ರಾಮಸ್ಥರಿಗೆ ಸೇರಿದ ಭೂಮಿ. ಬೃಹದಾಕಾರದಲ್ಲಿರುವ ಈ ನಂದಿ ವಿಗ್ರಹ, ನೋಡಲು ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹವನ್ನೇ ಹೋಲುತ್ತದೆ. ಗಾತ್ರದಲ್ಲಿ ಬೆಟ್ಟದ ನಂದಿಯಷ್ಟಿಲ್ಲದಿದ್ದರೂ ಗೋಚರದಲ್ಲಿ ಅದನ್ನೇ ಹೋಲುತ್ತದೆ. ಈ ಹಿನ್ನೆಲೆಯಲ್ಲಿ ಈಗ ಈ ಅಪರೂಪದ ವಿಗ್ರಹಗಳನ್ನು ಸಂರಕ್ಷಿಸುಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಂದಿನ ಪ್ರಕ್ರಿಯೆ ನಡೆಸಲು ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.
ಈ ನಡುವೆ ರಾಜ್ಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿ ಯಂತ್ರದ ಮೂಲಕ ವಿಗ್ರಹ ಮೇಲೆತ್ತುವ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದು, ಇದರ ಜವಾಬ್ದಾರಿಯನ್ನು ಇಲಾಖೆಯೇ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಈ ಸಂಬಂಧ ದೂರವಾಣಿ ಮೂಲಕ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ. ಗೋಪಾಲ್ ಅವರು ಹೇಳಿದಿಷ್ಟು..
ಅರಸನಕೆರೆ ಗ್ರಾಮದಲ್ಲಿ ಪತ್ತೆಯಾಗಿರುವ ನಂದಿ ವಿಗ್ರಹ ಮೂಲತಃ ಒಂದು ಕೆರೆ ಪ್ರದೇಶದಲ್ಲಿದೆ. ಈ ಹಿಂದೆಯೂ ಒಮ್ಮೆ ಗ್ರಾಮಕ್ಕೆ ಭೇಟಿ ನೀಡಲಾಗಿತ್ತು. ಆದರೆ ಸಂಪೂರ್ಣ ನೀರಿನಿಂದಾವೃತ್ತವಾಗಿದ್ದ ಕಾರಣ ಸಂರಕ್ಷಣೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕೆರೆ ಬತ್ತಿದ್ದು ನೀರಿಲ್ಲದ ಕಾರಣ ವಿಗ್ರಹ ಗೋಚರಿಸುತ್ತಿದೆ. ಇದನ್ನು ಜೋಪಾನವಾಗಿ ಸಂರಕ್ಷಿಸಲು ಇಲಾಖೆ ಮುಂದಾಗಿದೆ. ಅಂದಾಜು 150 ರಿಂದ 200 ವರ್ಷಗಳ ಹಳೆಯದಾದ ಈ ವಿಗ್ರಹಗಳನ್ನು ಸ್ಥಳೀಯ ಕಲ್ಲಿನಿಂದಲೇ ನಿರ್ಮಿಸಿರುವ ಸಾಧ್ಯತೆ ಇದ್ದು, ಬಹುಶಃ ಆ ಗ್ರಾಮದಲ್ಲಿ ನೆಲಸಿದ್ದ ಶಿಲ್ಪಿ ಇದನ್ನು ಕೆತ್ತಿರಬಹುದು ಎಂದು ಅಭಿಪ್ರಾಯಪಟ್ಟರು.
ನಂದಿ ವಿಗ್ರಹಗಳನ್ನು ಕೆತ್ತಿರುವ ವಿನ್ಯಾಸ ಗಮನಿಸಿದರೆ ಇದು ಒಡೆಯರ್ ಆಡಳಿತದ ಅವಧಿಯಲ್ಲಿನದು ಎಂದು ಹೇಳಬಹುದು. ಈ ಅಪರೂಪದ ವಿಗ್ರಹ ಪತ್ತೆಯಾಗಿರುವ ಸ್ಥಳ ಸೇರಿದಂತೆ ಸುತ್ತಲಿನ ಅಂದಾಜು ಒಂದು ಎಕರೆ ಪ್ರದೇಶ ಜಾಗವನ್ನು ಬಳಸಿಕೊಂಡು ಅದನ್ನು ಮ್ಯೂಸಿಯಂ ಮಾದರಿಯಲ್ಲಿ ಅಭಿವೃಧ್ಧಿ ಪಡಿಸುವ ಸಂಬಂಧ ಸರಕಾರದ ಜತೆ ಸಮಾಲೋಚಿಸಲಾಗುವುದು ಎಂದರು.
ನಂದಿವಿಗ್ರಹದ ಹಿನ್ನೆಲೆ :
ಈ ನಂದಿ ವಿಗ್ರಹಗಳು ಐತಿಹಾಸಿಕ ಹಿನ್ನೆಲೆಯುಳ್ಳವು ಎಂಬುದು ಅರಸನ ಕೆರೆ ಗ್ರಾಮಸ್ಥರ ಅಭಿಮತವಾಗಿದ್ದು, ಕಳೆದ ಹಲವಾರು ಸಮಯದಿಂದ ಗೋಚರಿಸಿದೆ ಇದೀಗ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಗ್ರಾಮಸ್ಥರ ಪ್ರಕಾರ, ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳು ಮಣ್ಣಲ್ಲಿ ಹುದುಗಿರುವ ಬಗ್ಗೆ ಕುರುಹು ಸಿಕ್ಕಿತ್ತು. ಆಗ ಗ್ರಾಮಸ್ಥರೆಲ್ಲರು ಸೇರಿ ಭೂಮಿಯಲ್ಲಿ ಅಡಗಿದ್ದ ನಂದಿ ವಿಗ್ರಹಗಳನ್ನು ಹೊರ ತೆಗೆಯಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಆದಾಗ್ಯೂ ಹಳ್ಳದಲ್ಲಿದ್ದ ಈ ನಂದಿ ವಿಗ್ರಹಗಳಿಗೆ ದಶಕಗಳ ಹಿಂದಿನಿಂದಲೂ ಪೂಜೆ ಮಾಡುತ್ತ ಬಂದಿದ್ದಾರೆ ಸ್ಥಳೀಯರು. ಇದೀಗ ಈ ನಂದಿ ವಿಗ್ರಹಗಳ ಜತೆಗೆ ಸುಮಾರು ಹತ್ತರಿಂದ ಹದಿನೈದು ಇತರೆ ವಿಗ್ರಹಗಳು ಸಹ ಪತ್ತೆಯಾಗಿವೆ,
ಖುದ್ದು ಮಹಾರಾಜ್ರೆ ಆಗಮಿಸಿದ್ರು :
ಬೃಹತ್ ನಂದಿ ವಿಗ್ರಹಗಳು ಹುದುಗಿರುವ ಈ ಜಾಗಕ್ಕೆ ಖುದ್ದು ಮಹಾರಾಜ ಚಾಮರಾಜ ಒಡೆಯರ್ ಅವರೇ ಭೇಟಿ ನೀಡಿದ್ದರು ಎನ್ನಲಾಗಿದೆ.
ಇಲ್ಲಿನ ಗ್ರಾಮಸ್ಥರ ಹೇಳಿಕೆ ಪ್ರಕಾರ, ದಶಕಗಳ ಹಿಂದೆಯೇ ಚಾಮರಾಜ ಒಡೆಯರ್ ಅವರು ಈ ಅರಸಿನ ಕೆರೆಗೆ ಬಂದು ಸ್ಥಳವನ್ನು ಪರಿಶೀಲಿಸಿದ್ದರು. ಮಾತ್ರವಲ್ಲದೆ, ಮಣ್ಣಿನಲ್ಲಿ ಹುದುಗಿರುವ ನಂದಿ ವಿಗ್ರಹ ಹೊರ ತೆಗೆಸಲು ಮುಂದಾಗಿದ್ದರು. ಆದರೆ ಸಾಧ್ಯವಾಗದೆ ಹಿಂದಿರುಗಿದ್ದರು.
key words : 200 year old Nandi idol found in Mysore; The Department of Archeology will develop and preserve like museum .