ಬೆಂಗಳೂರು,ಜುಲೈ,7, 2021 (www.justkannada.in): ದಕ್ಷಿಣ ಭಾರತದಲ್ಲಿ ಶಾಲಾ ಶಿಕ್ಷಣದಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ ಅತ್ಯಂತ ಆದ್ಯತೆಯ ಭಾಷೆಯಾಗಿದ್ದರೂ ಸಹ, ಕರ್ನಾಟಕ ಇದರಿಂದ ಹೊರತಾಗಿದೆ, ಏಕೆಂದರೆ ಕರ್ನಾಟಕದಲ್ಲಿ ಬಹುತೇಕ ವಿದ್ಯಾರ್ಥಿಗಳು ತರಗತಿಗಳಲ್ಲಿ ಪ್ರಾದೇಶಿಕ ಭಾಷೆ ‘ಕನ್ನಡ’ದಲ್ಲಿಯೇ ಬೋಧನೆ ಪಡೆಯಲು ಬಯಸುತ್ತಾರೆ.
ಭಾರತದಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಪಟ್ಟ ವಿಶ್ಲೇಷಣಾ ಪ್ರವೃತ್ತಿಗಳ ಕುರಿತು ಯೂನಿಫೈಡ್ ಡಿಸ್ಟ್ರಿಕ್ಟ್ ಇನ್‌ಫರ್ಮೇಷನ್ ಸಿಸ್ಟಂನ (ಯುಡಿಐಎಸ್‌ಇ) ಸಿದ್ಧಪಡಿಸಿರುವಂತಹ ಇತ್ತೀಚಿನ ವರದಿಯೊಂದರ ಪ್ರಕಾರ, ಕರ್ನಾಟಕದಲ್ಲಿ ಶೇ.೫೩.೫ರಷು ವಿದ್ಯಾರ್ಥಿಗಳು ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಬೋಧನೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ತಿಳಿದು ಬಂದಿದೆ. ೨೦೧೯-೨೦ರಲ್ಲಿ ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಶೇ.೨೦ರಷ್ಟು ಹೆಚ್ಚಾಗಿರುವುದರ ಹೊರತಾಗಿಯೂ ಈ ಅಂಶ ಬೆಳಕಿಗೆ ಬಂದಿದೆ.
ಹಾಗಾಗಿ, ದಕ್ಷಿಣ ಭಾರತದಲ್ಲಿ ಆಂಗ್ಲ ಮಾಧ್ಯಮ ಬೋಧನೆಗಿಂತ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಆದ್ಯತೆ ಇರುವ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಈ ವರದಿ ೨೦೧೯-೨೦೨೦ರ ಶೈಕ್ಷಣ ವರ್ಷದ ದತ್ತಾಂಶಗಳ ಪ್ರಕಾರ ಸಿದ್ಧವಾಗಿದೆ.
ದೇಶದ ಇತರೆ ಎಲ್ಲಾ ರಾಜ್ಯಗಳ ಪೈಕಿ ತರಗತಿ ಕಲಿಕೆಯಲ್ಲಿ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಆದ್ಯತೆ ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ೮೯.೯ರಷ್ಟು ವಿದ್ಯಾರ್ಥಿಗಳು ಬೆಂಗಾಲಿ ಮಾಧ್ಯಮ ಶಾಲೆಗಳಿಗೆ ದಾಖಲಾಗುವುದರೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ದಕ್ಷಿಣ ಭಾರತದ ಇತರೆ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತೆಲುಗು ಮಾಧ್ಯಮ ಶಾಲೆಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೩೦%ರಷ್ಟಿದ್ದು, ಕೇರಳದಲ್ಲಿ ಮಲಯಾಳಂ ಮಾಧ್ಯಮ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೩೪.೮ರಷ್ಟಿದೆ.
ತಮಿಳುನಾಡು ರಾಜ್ಯವೂ ಸಹ ಪ್ರಾದೇಶಿಕ ಭಾಷೆಯ ಆದ್ಯತೆಯಲ್ಲಿ ಇಳಿಕೆಯನ್ನು ಕಂಡಿದೆ. ತಮಿಳು ಮಾಧ್ಯಮ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೨೦೧೬ರಲ್ಲಿ ೫೭.೬ರಷ್ಟಿತ್ತು. ಆದರೆ ಈ ಪ್ರಮಾಣ ೨೦೧೯-೨೦೨೦ರಲ್ಲಿ ಶೇ.೪೨.೬ಕ್ಕೆ ಇಳಿಕೆಯಾಗಿದೆ.
ಈ ಹಿಂದೆ, ಅಂದರೆ ೨೦೧೮ರಲ್ಲಿ ಕರ್ನಾಟಕದ ಆಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಪರಿಚಯಿಸುವ ಪ್ರಸ್ತಾಪ ಮಾಡಿದಾಗ ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ತೀವ್ರ ಟೀಕೆ ಹಾಗೂ ವಿರೋಧ ವ್ಯಕ್ತವಾಗಿತ್ತು. ಸರ್ಕಾರಿ ಶಾಲೆಗಳ ಕಡೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೆಳೆಯಲು ಕುಮಾರಸ್ವಾಮಿಯವರು ಈ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ತೀವ್ರ ವಿರೋಧ ಎದುರಾದ ಹಿನ್ನೆಲೆಯಲ್ಲಿ ಆಗಿನ ಸರ್ಕಾರ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಆಂಗ್ಲವನ್ನು ಒಂದು ಮಾಧ್ಯಮನ್ನಾಗಿಸದೆ ಕೇವಲ ಒಂದು ಭಾಷೆಯಾಗಿ ಕಲಿಸುವುದನ್ನು ಖಾತ್ರಿಪಡಿಸಲು ನಿರ್ಧರಿಸಿತು.
ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್
Key words: Karnataka -only -state – South India – regional language- learning – students.