ಬೆಂಗಳೂರು:ಜುಲೈ-15:(www.justkannada.in) ಕುಡಿದ ಅಮಲಿನಲ್ಲಿ ವಾಹನಕ್ಕೆ ಡಿಕ್ಕಿಹೊಡೆದು ಕೆಳಗೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ಪೊಲೀಸರ ಕೈಯ್ಯನ್ನೆ ಕಚ್ಚಿ, ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗ್ಳೂರಿನ ಲಾಲ್ ಬಾಗ್ ಸಮೀಪ ನಡೆದಿದೆ.
ಲಾಲ್ಬಾಗ್ ಪಶ್ಚಿಮ ದ್ವಾರದಲ್ಲಿ ಈ ಘಟನೆ ನಡೆದಿದೆ. ಬಸವನಗುಡಿ ಸಂಚಾರ ಠಾಣೆ ಸುರೇಶ್ (48) ಗಾಯಗೊಂಡ ಮುಖ್ಯಪೇದೆ. ಆರೋಪಿ ವಿಜಯಕುಮಾರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಪೇದೆ ಸುರೇಶ್ ಲಾಲ್ಬಾಗ್ ಪಶ್ಚಿಮ ದ್ವಾರದಲ್ಲಿರುವ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ತಡರಾತ್ರಿ ಏಕಮುಖ ರಸ್ತೆಯಲ್ಲಿ ವೇಗವಾಗಿ ಬೈಕ್ನಲ್ಲಿ ಬಂದ ವಿಜಯಕುಮಾರ್, ವಾಹನವೊಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ತಕ್ಷಣ ಸುರೇಶ್ ಸವಾರನ ರಕ್ಷಣೆಗೆ ಧಾವಿಸಿ, ಬಿದ್ದವನನ್ನು ಮೇಲೆ ಎತ್ತಲು ಮುಂದಾಗಿದ್ದಾರೆ.
ಆಗ ವಿಜಯ್ ಕುಮಾರ್ ಏಕಾಏಕಿ ತನ್ನ ಬಳಿ ಇದ್ದ ಹೆಲ್ಮೆಟ್ನಿಂದ ಸುರೇಶ್ ಅವರ ಮೇಲೆ ಹಲ್ಲೆ ನಡೆಸಿ, ಕೈಗೆ ಬಲವಾಗಿ ಕಚ್ಚಿದ್ದಾನೆ. ಆಗ ಸ್ಥಳೀಯರು ಸುರೇಶ್ ಅವರ ರಕ್ಷಣೆಗೆ ಧಾವಿಸಿದರು.
ಹಲ್ಲೆ ಮಾಡಿರುವ ವಿಜಯ್ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಸವಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ.