ಬೆಂಗಳೂರು, ಜುಲೈ 24, 2021 (www.justkannada.in): ಭಾರತದ ಪುರುಷರ ಹಾಕಿ ತಂಡ ಇಂದು ಟೊಕಿಯೊ ಒಲಂಪಿಕ್ಸ್ನಲ್ಲಿ ತನ್ನ ಅಭಿಯಾನವನ್ನು ನ್ಯೂಜಲೆಂಡ್ ವಿರುದ್ಧ ಆರಂಭಿಸಲಿದೆ.
ಮಹಿಳಾ ತಂಡವೂ ತನ್ನ ಮೊದಲ ಪಂದ್ಯವನ್ನು ಇಂದು ಆಡಲಿದೆ. ಒಲಂಪಿಕ್ಸ್ ಕೂಟಗಳಲ್ಲಿ 8 ಬಾರಿ ಚಿನ್ನದ ಪದಕವನ್ನು ಗೆದ್ದಿರುವ ಭಾರತದ ಪುರುಷ ಹಾಕಿ ತಂಡದ ಸಾಧನೆ ಅಮೋಘವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತಂಡದ ಸಾಧನೆ ಹೇಳಿಕೊಳ್ಳುವಂತೆ ಇಲ್ಲ.
ಭಾರತ ಹಾಕಿಯಲ್ಲಿ ಬಲಿಷ್ಠವೆನಿಸಿಕೊಂಡಿರುವ ರಾಷ್ಟ್ರಗಳ ಗುಂಪಿನಲ್ಲಿದೆ. ಎ ಗುಂಪಿನಲ್ಲಿರುವ ಭಾರತದೊಂದಿಗೆ, ಕಳೆದ ಬಾರಿಯ ಚಾಂಪಿಯನ್ಸ್ ಅರ್ಜೆಂಟೀನಾ, ಪ್ರಬಲ ಆಸ್ಟ್ರೇಲಿಯ, ಜಪಾನ್, ನ್ಯೂಜಿಲೆಂಡ್ ಮತ್ತು ಸ್ಪೇನ್ ಇವೆ.
2016 ರ ರಿಯೋ ಒಲಂಪಿಕ್ಸ್ ನಂತರ ಭಾರತವು ನ್ಯೂಜಲೆಂಡ್ ವಿರುದ್ಧ ಆಡಿರುವ 11 ಪಂದ್ಯಗಳಲ್ಲಿ 8 ಬಾರಿ ಗೆದ್ದಿದೆ. ಈ 11 ಪಂದ್ಯಗಳಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 34ಗೋಲುಗಳನ್ನು ಬಾರಿಸಿದ್ದು ಕೇವಲ 14 ಗೋಲುಗಳನ್ನು ಬಿಟ್ಟುಕೊಟ್ಟಿದೆ.
ನ್ಯೂಜಿಲೆಂಡ್ ವಿರುದ್ಧ ಭಾರತ ಕೊನೆಯ ಬಾರಿ ಇದೇ ಮೈದಾನದಲ್ಲಿ ಎಫ್ಐಎಚ್ ಟೆಸ್ಟ್ ಈವೆಂಟ್ನಲ್ಲಿ ಆಡಿ ಎದುರಾಳಿಗಳನ್ನು 5-0 ಅಂತರದಿಂದ ಸದೆಬಡೆದಿತ್ತು.