ಮೈಸೂರು,ಜುಲೈ,31,2021(www.justkannada.in): ಬಳಸಿ ಬಿಸಾಡೋದು ಬಿಜೆಪಿಯ ಸಂಸ್ಕೃತಿ ಮತ್ತು ಸ್ವಭಾವ. ಅದೇ ರೀತಿ ಯಡಿಯೂರಪ್ಪ ಅವರನ್ನು ಬಿಜೆಪಿ ನಾಯಕರು ಬಳಸಿಕೊಂಡು ಬಿಸಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಮೋದಿ ಮತ್ತು ಅಮಿತ್ ಶಾಗೆ ಹಿರಿಯ ನಾಯಕರ ಬಗ್ಗೆ ಗೌರವ ಇಲ್ಲ. ಹಿರಿಯ ನಾಯಕರನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರಿಗೂ ಅದನ್ನೇ ಮಾಡಿದ್ದಾರೆ. ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಯಶ್ವಂತ್ ಸಿನ್ಹಾ, ಕೇಶೂಬಾಯಿ ಪಟೇಲ್, ನರೇನ್ ಪಾಂಡ್ಯ ಮುಂತಾದ ಹಲವು ನಾಯಕರನ್ನು ಮೂಲೆ ಗುಂಪು ಮಾಡಲಾಗಿದೆ. ಮೋದಿ ಬಿಜೆಪಿ ಸೃಷ್ಠಿಸಿದ ನಾಯಕ, ಹಿರಿತನದ ನಾಯಕ ಅಲ್ಲ ಎಂದು ಟೀಕಿಸಿದರು.
ಪೋನ್ ದುರ್ಬಳಕೆ ಸ್ಪೈ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ಚುನಾಯಿತ ಸರ್ಕಾರವನ್ನು ಬೀಳಿಸಲು ಬಳಸಿದೆ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಯಡಿಯೂರಪ್ಪ ಅವರನ್ನು ತೆಗೆಯಲಾಯಿತು ? ಆರ್ ಎಸ್ ಎಸ್ ಕೆಲವರು ಸಚಿವರನ್ನು ತೆಗೆಯಲು ಹೇಳುತ್ತಿದೆ. ಇನ್ನು ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದರು.
ನೆರೆ ಹಾನಿ: ರಾಜ್ಯಕ್ಕೆ ಪ್ರಧಾನಿ ಮೋದಿ ಬಂದರಾ..?
ನಾವು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೆವು. ಪ್ರಧಾನಿಯವರೇ ಇದನ್ನು ಸಾಬೀತು ಮಾಡಿದ್ದಾರೆ. ಸರ್ಕಾರದ ಖಜಾನೆ ಲೂಟಿ ಮಾಡುವ ಕೆಲಸ ಅವರದ್ದಾಗಿತ್ತು. ಕಳೆದು ಎರಡು ವರ್ಷಗಳಿಂದ ಅವರ ಕೆಲಸ ಏನು. ಲೂಟಿ ಮಾಡುವುದು ಜನರನ್ನು ಮರೆಯುವುದು. ಜನರು ಪ್ರವಾಹದಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಬೆಳೆ ಹಾನಿಯಾಗಿ ಮನೆಗಳು ಹಾಳಾಗಿವೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರಾ ? ಏನಾದರೂ ಅನುದಾನ ನೀಡಿದ್ರಾ ?ಗುಜರಾತ್ ಬಿಹಾರದಲ್ಲಿ ಪ್ರವಾಹ ಉಂಟಾದರೇ ಅನುದಾನ ನೀಡುತ್ತಾರೆ. ಆದರೆ ಕರ್ನಾಟಕಕ್ಕೆ ಅನುದಾನ ನೀಡಲ್ಲ. ಕರ್ನಾಟಕ ಭಾರತದ ಭೂಪಟದಲ್ಲಿ ಇದೆ ಅನ್ನೋದನ್ನು ಮರೆತಿದ್ದಾರೆ ಎಂದು ಕಿಡಿಕಾರಿದರು.
ತಮ್ಮ ನಾಯಕರನ್ನು ಕಡೆಗಣಿಸುವುದರಲ್ಲಿ ಮೋದಿ ಅಮಿತ್ ಶಾ ಎತ್ತಿದ ಕೈ.
ಸಿಬಿಐ ಇಡಿ ಸೇರಿ ಎಲ್ಲರ ಮೇಲೆ ಬಿಜೆಪಿ ಸ್ಪೈ ಮಾಡುತ್ತಿದೆ. ಸಚಿವರ ಮನೆ ಸೇರಿ ಎಲ್ಲರೂ ಸ್ಪೈನಲ್ಲಿದ್ದಾರೆ. ಬಿಹಾರ ಮಣಿಪುರ ಸೇರಿ ಎಲ್ಲಾ ಕಡೆ ಇದೇ ರೀತಿ ಆಗುತ್ತಿದೆ. ತಮ್ಮ ನಾಯಕರನ್ನು ಕಡೆಗಣಿಸುವುದರಲ್ಲಿ ಮೋದಿ ಅಮಿತ್ ಶಾ ಎತ್ತಿದ ಕೈ. ಹಿರಿಯರನ್ನು ಅವರು ಇಷ್ಟಪಡುವುದಿಲ್ಲ. ಯಾರಾದರೂ ತಮ್ಮ ತಂದೆ ತಾಯಿ ತಾತಾ ಅಜ್ಜಿ ಸೇರಿ ಹಿರಿಯರನ್ನು ಮನೆಯಿಂದ ಆಚೆ ಹಾಕುತ್ತಾರಾ ? ಇದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಏನು ಹೇಳುತ್ತಾರೆ ? ಅದನ್ನು ನಾನು ನನ್ನ ಬಾಯಿಂದ ಹೇಳುವುದಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ್ ಲೇವಡಿ ಮಾಡಿದರು.
ರಾಜ್ಯದ ಕೊರೊನಾ ಪರಿಸ್ಥಿತಿ ಉಲ್ಲೇಖಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಆಕ್ಸಿಜನ್ ಸಿಗದೆ ರೆಮಿಡಿಸಿಯರ್ ಸಿಗದ ಜನರ ಸಮಸ್ಯೆಗೆ ಸಿಲುಕಿದ್ದಾರೆ. ಪ್ರಧಾನಿ ಎಲ್ಲಿ ಹೋಗಿದ್ದರು ಜೆಪಿ ನಡ್ಡಾ ಎಲ್ಲಿ ಹೋಗಿದ್ದರು ? ಯಡಿಯೂರಪ್ಪ ಬೊಮ್ಮಾಯಿ ಎಲ್ಲಿ ಹೋಗಿದ್ದಾರೆ ? ಅವರಿಗೆಲ್ಲಾ ಅಧಿಕಾರದ ದಾಹ ಅಷ್ಟೇ. ಇದಕ್ಕಾಗಿ ನಾವು ಎಲ್ಲರೂ ಒಟ್ಟಿಗೆ ಸೇರಿದ್ದೇವೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸೇರಿದ್ದೇವೆ ಎಂದು ತಿಳಿಸಿದರು.
ಇಂದಿನ ಸಭೆಯ ಉದ್ದೇಶ ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಪಡೆಯುವುದು. ಅವರ ಅಭಿಪ್ರಾಯದಂತೆ ಪಕ್ಷ ಮುನ್ನಡೆಸುವುದು. ಪಕ್ಷವನ್ನು ಮತ್ತೆ ಮರು ಸಂಘಟಿಸುವುದು.ಜಿಲ್ಲಾ ಮಟ್ಟದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕುವುದು ಎಂದು ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.
Key words: BS Yeddyurappa – ousted – BJP leaders-amith sha-PM-modi-congress-Rangeep Singh Surjewala