ಬೆಂಗಳೂರು, ಆಗಸ್ಟ್ 6, 2021(www.justkannada.in): ಕೋವಿಡ್ 3ನೇ ಅಲೆಯ ಭಯ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿ, ಬೆಂಗಳೂರು ನಗರದಲ್ಲಿ 78 ಅಪಾರ್ಟ್ಮೆಂಟ್ ಕಟ್ಟಡಗಳು ಹಾಗೂ 71 ಸ್ಟ್ಯಾಂಡ್ ಅಲೋನ್ ಕಟ್ಟಡಗಳನ್ನು ಸೀಲ್ ಡೌನ್ ಮಾಡಿ, ಮೈಕ್ರೊ ಕಂಟೇನ್ಮೆಂಟ್ ಪ್ರದೇಶಗಳೆಂದು ಗುರುತಿಸಿದೆ.
ಈ ಪ್ರದೇಶದಗಳಲ್ಲಿ ತಲಾ 3ಕೋವಿಡ್ ಪ್ರಕರಣಗಳು ಗುರುತಿಸಿದ್ದು, ಬೆಂಗಳೂರು ನಗರದಲ್ಲಿ ಪ್ರಸ್ತುತ ಒಟ್ಟು 156 ಸಕ್ರಿಯ ಕಂಟೇನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪೈಕಿ ಮಹದೇವಪುರ ಅತೀ ಹೆಚ್ಚಿನ ಅಂದರೆ 42 ಕಂಟೇನ್ಮೆಂಟ್ ಪ್ರದೇಶಗಳನ್ನು ಹೊಂದಿದ್ದರೆ, ಬೊಮ್ಮನಹಳ್ಳಿಯಲ್ಲಿ ೩೧, ಪೂರ್ವ ೩೪, ಯಲಹಂಕ ೧೭, ದಕ್ಷಿಣ ೧೬, ಆರ್ಆರ್ ನಗರ ೯, ಪಶ್ಚಿಮ ೫ ಹಾಗೂ ದಾಸರಹಳ್ಳಿಯಲ್ಲಿ ಎರಡು ಸಕ್ರಿಯ ಕಂಟೇನ್ಮೆಂಟ್ ಪ್ರದೇಶಗಳಿವೆ. ಆಶ್ಚರ್ಯಕರವಾಗಿ ಒಂದು ಶಾಲೆ ಹಾಗೂ ಎರಡು ವಿದ್ಯಾರ್ಥಿನಿಲಯಗಳನ್ನೂ ಸಹ ಮೈಕ್ರೊ ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ. ಈ ಕಂಟೇನ್ಮೆಂಟ್ ಪ್ರದೇಶಗಳಡಿ ಸುಮಾರು ೫,೮೦೫ ಮನೆಗಳಿದ್ದು, ತೀವ್ರ ನಿಗಾ ವಹಿಸಲಾಗಿದೆ.
ಈ ನಡುವೆ, ಕರ್ನಾಟಕದಲ್ಲಿ ಗುರುವಾರದಂದು ೧,೭೮೫ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕಾರವಾಗಿ ರಾಜ್ಯದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೨೯.೧೩ ಲಕ್ಷಕ್ಕೆ ಏರಿಕೆಯಾಗಿದೆ. ೪೧೪ ಪ್ರಕರಣಗಳೊಂದಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆ ೩೩೭ ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಗುರುವಾರದಂದು ಬೆಂಗಳೂರಿನಲ್ಲಿ ಒಟ್ಟು ೨೫ ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
ವ್ಯಾಪಾರಸ್ಥರಿಗೆ ಎಚ್ಚರಿಕೆ
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ವರದಿಗಾರರೊಂದಿಗೆ ಮಾತನಾಡುತ್ತಾ, ಈ ನಡುವೆ ಬೆಂಗಳೂರು ನಗರದಲ್ಲಿ ಪ್ರತಿ ದಿನ ನಿರಂತರವಾಗಿ ೪೦೦ ರಿಂದ ೫೦೦ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆ ಆಗುತ್ತಿಲ್ಲವಾದರೂ ಸಹ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಅನುಸರಿಸುವುದು ಅಗತ್ಯ ಎಂದರು. ಕೇರಳ ಹಾಗೂ ಮಹಾರಾಷ್ಟçದಿಂದ ಬರುವವರ ಮೇಲೆ ನಿಗಾವಹಿಸುವ ಸಲುವಾಗಿ ೧೧ ತಂಡಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ಬುಧವಾರದಂದು ಕಡ್ಡಾಯವಾಗಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕೆಂದು ನಗರದ ಎಲ್ಲಾ ವ್ಯಾಪಾರಸ್ಥರಿಗೂ ಕಟ್ಟೆಚ್ಚರ ನೀಡುರುವುದಾಗಿಯೂ ತಿಳಿಸಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: covid 3rd –wave- panic- Bangalore- 149 buildings –seal- 156 containment areas.