ಬೆಂಗಳೂರು,ಆಗಸ್ಟ್,9,2021(www.justkannada.in): ತಮ್ಮ ನಿವಾಸ ಮತ್ತು ಕಚೇರಿಯ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಗಂಭೀರ ಆರೋಪ ಮಾಡಿದ್ದಾರೆ.
ರಾಜಕೀಯವಾಗಿ ಬೆಳೆಯಬಾರದೆಂದು ನಾನು ಈ ಹಿಂದೆ ಇದ್ದ ಪಕ್ಷದವರೇ ಇಡಿ ದಾಳಿ ಮಾಡಿಸಿದ್ದಾರೆ. ನನ್ನ ಏಳಿಗೆ ಸಹಿಸದವರು ನನ್ನ ಮೇಲೆ ಇಡಿ ದಾಳಿ ನಡೆಸಲು ದೂರು ನೀಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ
ಈ ಕುರಿತು ಮಾತನಾಡಿರುವ ಶಾಸಕ ಜಮೀರ್ ಅಹ್ಮದ್ ಖಾನ್, ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಅವರು ನಿರೀಕ್ಷಿಸಿರಲಿಲ್ಲ. ನಾನು ಈ ಹಿಂದೆ ಇದ್ದ ಪಕ್ಷದವರೇ ಇಡಿಗೆ ದೂರು ನೀಡಿದ್ದಾರೆ. ಅವರು ಯಾರು ಎಂದು ನಾನು ಹೆಸರು ಹೇಳಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದರು.
ನಮ್ಮ ಮನೆ ಮೇಲೆ ಐಟಿ ದಾಳಿಯಾಗಿಲ್ಲ. ಇಡಿ ದಾಳಿಯಾಗಿದೆ. ದೂರು ಆಧರಿಸಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ದಾಳಿಯಿಂದ ನನಗೂ ಅಚ್ಚರಿಯಾಗಿದೆ. ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮನೆ ನಿರ್ಮಾಣದ ಲೆಕ್ಕಚಾರ, ಒಳಾಂಗಣದ ವಿನ್ಯಾಸದ ಬಗ್ಗೆ ದಾಖಲೆ ಕೇಳಿದ್ದರು. ಅದಕ್ಕೆ ದಾಖಲೆಗಳನ್ನು ನೀಡಿದ್ದೇನೆ. ಇಡಿ ದಾಳಿಗೂ ಐಎಂಎ ವಂಚನೆ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರು.
ಈ ಹಿಂದೆ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ಇಡಿ ದಾಳಿಯಾಗಿತ್ತು. ಹಾಗದಾದರೇ ಡಿ.ಕೆ ಶಿವಕುಮಾರ್ ಅವರಿಗೂ ಐಎಂಎಗೂ ಸಂಬಂಧವಿದೆಯಾ..? ಎಂದು ಶಾಸಕ ಜಮೀರ್ ಪ್ರಶ್ನಿಸಿದರು.
Key words: ED attack-MLA- Jameer Ahmad Khan- serious allegations-against- HD kumaraswamy