ಬೆಂಗಳೂರು:ಜುಲೈ-19: ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಮತ್ತು ಲೋಹದ ಹಕ್ಕಿಗಳಿಗೂ ಭರ್ಜರಿ ಸಂಬಂಧವುಂಟು…!
ಹೌದು, ಯಾಕೆಂದರೆ, ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾದ ಮೇಲೆ, ಅಂದರೆ 18 ದಿನಗಳಲ್ಲಿ ಒಟ್ಟಾರೆ 55ಕ್ಕೂ ಹೆಚ್ಚು ನಿಗದಿತವಲ್ಲದ ವಿಶೇಷ ವಿಮಾನಗಳು ಹಾರಾಟ ನಡೆಸಿವೆ. ಇವುಗಳಲ್ಲಿ ಬಹುತೇಕ ಹಾರಾಟ ನಡೆಸಿದವರು ಸರ್ಕಾರದಿಂದ ಸಿಟ್ಟಿಗೆದ್ದು ಹೋದ ಅತೃಪ್ತ ಶಾಸಕರು, ಮುನಿಸಿಕೊಂಡ ಅವರನ್ನು ಕರೆತರಲು ಹೋದ ನಾಯಕರು, ಸುದ್ದಿ ತಿಳಿಯುತ್ತಿದ್ದಂತೆ ಸರ್ಕಾರದ ನೆರವಿಗೆ ಬಂದ ವರಿಷ್ಠರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಲೋಹದ ಹಕ್ಕಿಗಳು ರಾಜಕೀಯ ನಾಯಕರಿಗೆ “ಸಂಪರ್ಕ ಸೇತುವೆ’ಗಳಾಗಿವೆ.
ಮುಂಬೈ, ದೆಹಲಿಗೇ ಹೆಚ್ಚು: ವಿಶೇಷ ವಿಮಾನಗಳನ್ನು ಹೆಚ್ಚಾಗಿ ಬಳಕೆ ಮಾಡುವವರು ಉದ್ಯಮಿಗಳು, ವಿಐಪಿಗಳು. ಆದರೆ, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾದ ಮೇಲೆ ರಾಜಕಾರಣಿಗಳೇ ಹೆಚ್ಚಾಗಿ ಈ ಮಾದರಿಯ ವಿಮಾನಗಳನ್ನು ಬುಕಿಂಗ್ ಮಾಡಿದ್ದಾರೆ. ಅವುಗಳಲ್ಲಿ ಬೆಂಗಳೂರು - ಮುಂಬೈ ಮತ್ತು ಬೆಂಗಳೂರು-ದೆಹಲಿ ಮಾರ್ಗದಲ್ಲೇ ಹೆಚ್ಚು ವಿಮಾನಗಳು ಕಾರ್ಯಾಚರಣೆ ಮಾಡಿವೆ. ವಿಶೇಷ ವಿಮಾನಗಳು ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಮಾಡಿದರೂ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಟ್ರಾμಕ್ ಅನುಮತಿ ಪಡೆಯಬೇಕಾಗುತ್ತದೆ.
ಎರಡು ವಾರಗಳಲ್ಲಿ ಅಂದಾಜು 25ರಿಂದ 30 ವಿಶೇಷ ವಿಮಾನಗಳು ಆಗಮನವಾಗಿದ್ದರೆ, ಹೆಚ್ಚು ಕಡಿಮೆ ಇಷ್ಟೇ ವಿಮಾನಗಳ ನಿರ್ಗಮನವೂ ಆಗಿದೆ ಎಂದು ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ.
ಯಾರ್ಯಾರು ಪ್ರಯಾಣ?: ಹತ್ತು ಅತೃಪ್ತ ಶಾಸಕರು ಬೆಂಗಳೂರು ಮುಂಬೈ ನಡುವೆ ವಿಶೇಷ ವಿಮಾನದಲ್ಲಿ ಮೂರು ಬಾರಿ ಪ್ರಯಾಣ ಮಾಡಿದ್ದರೆ, ರಾಜಕೀಯ ಅತಂತ್ರದ ಸುದ್ದಿ ತಿಳಿದು ವಿದೇಶದಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ. ಅತೃಪ್ತರ ರಾಜೀನಾಮೆಯಿಂದ ಉಂಟಾದ ಪರಿಸ್ಥಿತಿ ನಿಭಾಯಿಸಲು ಕಾಂಗ್ರೆಸ್ ಹಿರಿಯ ನಾಯಕ ಗುಲಾಂನಬಿ ಆಜಾದ್ ಒಮ್ಮೆ ಬಂದು ಹೋಗಿದ್ದಾರೆ. ಅತೃಪ್ತರನ್ನು ಕರೆತರಲು ಸಚಿವರಾದ ಡಿ.ಕೆ. ಶಿವಕುಮಾರ್, ಜಿ.ಟಿ. ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಮುಂಬೈಗೆ ಹೋಗಿಬಂದಿದ್ದಾರೆ. ಅತೃಪ್ತರ ಗುಂಪು ಸೇರಲು ಶಾಸಕ ಎಂಟಿಬಿ ನಾಗರಾಜ್ ಮತ್ತು ಅಶೋಕ್ ಮುಂಬೈಗೆ ಹಾರಿದ್ದಾರೆ. ಗುರುವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ವರು ಶಾಸಕರೊಂದಿಗೆ ಶ್ರೀಮಂತ ಪಾಟೀಲ ಕೂಡ ಇದೇ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ.
ಗಂಟೆಗೆ 2.25 ರಿಂದ 2.50 ಲಕ್ಷ ರೂ: ಒಂದು ಚಾರ್ಟರ್ಡ್ ವಿಮಾನ (ಐದು ಆಸನಗಳದ್ದು)ದ ಬಾಡಿಗೆ ಪ್ರತಿ ಗಂಟೆಗೆ 2.25ರಿಂದ 2.50 ಲಕ್ಷ ರೂ. ಬೆಂಗಳೂರು ಮುಂಬೈ ನಡುವಿನ ಹಾದಿ 1.20 ಗಂಟೆಯದ್ದಾಗಿದೆ. ಅಂದರೆ 4.50ರಿಂದ 5 ಲಕ್ಷ ರೂ. ಆಗುತ್ತದೆ. ಈ ಮಾದರಿಯ ವೈಮಾನಿಕ ಸೇವಾ ಕಂಪೆನಿಗಳು ದೇಶದಲ್ಲಿ ನಾಲ್ಕರಿಂದ ಐದು ಇವೆ. ಇವುಗಳನ್ನು ಹೊರತುಪಡಿಸಿ, ದೊಡ್ಡ ಉದ್ಯಮಿಗಳು ಕೂಡ ಸ್ವಂತ ವಿಮಾನಗಳನ್ನು ಹೊಂದಿದ್ದು, ಅವರಿಂ ದಲೂ ವಿಮಾನ ಸೇವೆ ಬಾಡಿಗೆಗೆ ದೊರೆಯುತ್ತವೆ ಎಂದು ಬಿಐಎಎಲ್ ಮೂಲಗಳು ತಿಳಿಸಿವೆ.
6 ತಾಸು ಮೊದಲೇ ಬುಕಿಂಗ್
ವಿಶೇಷ ವಿಮಾನಗಳನ್ನು ಕನಿಷ್ಠ ಆರು ತಾಸು ಮುಂಚಿತವಾಗಿಯೇ ಬುಕಿಂಗ್ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇವು ಲಭ್ಯ ಇರುತ್ತವೆ. ಅಂದಹಾಗೆ ಇಲ್ಲಿಂದ ಮಾಸಿಕ ಸರಾಸರಿ 150 ನಿಗದಿತವಲ್ಲದ ವಿಮಾನ (ಆಗಮನ ನಿರ್ಗಮನ ಸೇರಿ)ಗಳು ಹಾರಾಟ ನಡೆಸುತ್ತವೆ.
ಕೃಪೆ:ಉದಯವಾಣಿ