ಬೆಂಗಳೂರು, ಆಗಸ್ಟ್ ೧೮, ೨೦೨೧ (www.justkannada.in): “ರಾಜ್ಯದಲ್ಲಿ ಕೋವಿಡ್ ೩ನೇ ಅಲೆ ಸಂಭವಿಸುವುದಕ್ಕೂ ಮುಂಚೆ ಕರ್ನಾಟಕ ಸರ್ಕಾರವು ‘ಆರೋಗ್ಯ ನಂದನ’ ಎಂಬ ವಿಶೇಷ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿದೆ. ಈ ಕಾರ್ಯಕ್ರಮದಡಿ ೧.೫ ಕೋಟಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ,”
ಕೋವಿಡ್ ೩ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಮುಂಚೂಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
“ಈ ಯೋಜನೆಯಡಿ ಎಲ್ಲಾ ಮಕ್ಕಳಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅಪೌಷ್ಠಿಕತೆ, ರೋಗನಿರೋಧಕ ಶಕ್ತಿ ಸಮಸ್ಯೆಗಳಿರುವಂತಹ ಮಕ್ಕಳನ್ನು ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನಾವು ಎಲ್ಲಾ ಮಕ್ಕಳಿಗೂ ಅಗತ್ಯ ಪೌಷ್ಠಿಕಾಂಶ ಹಾಗೂ ಆಹಾರ ಲಭಿಸುವುದನ್ನು ಖಾತ್ರಿಪಡಿಸುತ್ತೇವೆ. ಇದರಿಂದ ಮಕ್ಕಳಿಗೆ ಕೋವಿಡ್ ಸೋಂಕಿನ ವಿರುದ್ಧ ರೋಗಪ್ರತಿರೋಧಕತೆ ಲಭಿಸುತ್ತದೆ ಎಂಬುದು ಆರೋಗ್ಯ ಸಚಿವ ಡಾ.ಸುಧಾಕರ್ ಅಭಿಪ್ರಾಯ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಈ ಯೋಜನೆಯ ರೂಪುರೇಷೆಗಳು ಸಿದ್ಧವಾಗಿವೆ. “ಇದು ಸಿಎಂ ಬೊಮ್ಮಾಯಿ ಅವರ ಕನಸು. ಈ ಯೋಜನೆಯನ್ನು ಬೊಮ್ಮಾಯಿ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಂತಹ ಹಾವೇರಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಮುಂದೆ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ. ೧.೫ ಕೋಟಿಗೂ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಿದ್ದು, ಸರ್ಕಾರದ ಬಳಿ ಇದಕ್ಕೆ ಬೇಕಾದ ಮೂಲಭೂತಸೌಕರ್ಯವಿದೆ,” ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ೨೮ ಲಕ್ಷ ಜನರು ಕೊರೊನಾ ಸೋಂಕಿತರಾಗಿದ್ದರು ಎಂಬ ಅನುಮಾನವಿದ್ದು, ಸೋಂಕಿತರಿಗೆ ಮುಂದಿನ ದಿನಗಳಲ್ಲಿ ಟಿಬಿ ಖಾಯಿಲೆ (ಕ್ಷಯರೋಗ) ಎದುರಾಗುವ ಸಂಭವವಿದೆ ಎಂದು ಅನುಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈಗಾಗಲೇ ಟಿಬಿ ಖಾಯಿಲೆ ಎದುರಾಗುವ ಸಮಸ್ಯೆಯನ್ನು ಅಂದಾಜಿಸಲು ಮತ್ತೊಂದು ಮುಂಚೂಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. “ಈ ರೀತಿ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದರಿಂದ ಟಿಬಿ ಖಾಯಿಲೆ ದೊಡ್ಡ ಪ್ರಮಾಣದಲ್ಲಿ ಹರಡುವುದನ್ನು ತಡೆಗಟ್ಟಲು ನಮಗೆ ನೆರವಾಗುತ್ತದೆ. ಕಳೆದ ೫ ವರ್ಷಗಳಲ್ಲಿ ಸೋಂಕಿನ ಪ್ರಮಾಣ ಶೇ.೩೩ರಷ್ಟು ಹೆಚ್ಚಾಗಿದೆ. ಹಾಗಾಗಿ ಕೋವಿಡ್ ಸೋಂಕಿತರು ಸ್ವಯಂಪ್ರೇರಿತವಾಗಿ ಉಚಿತವಾಗಿ ಲಭ್ಯವಿರುವ ಟಿಬಿ ತಪಾಸಣೆಯನ್ನೂ ಪಡೆದುಕೊಳ್ಳವುಂತೆ ಕೋರುತ್ತೇನೆ,” ಎಂದು ತಿಳಿಸಿದರು.
ಕರ್ನಾಟಕ ಸರ್ಕಾರವು ಸಂಪೂರ್ಣ ಲಸಿಕಾಕರಣವನ್ನು ಖಾತ್ರಿಪಡಿಸಲು ಔಷಧ ತಯಾರಿಕಾ ಕಂಪನಿಗಳು, ಆಹಾರ ಮತ್ತು ಪಾನೀಯಗಳನ್ನು ತಯಾರಿಸುವ ಕಂಪನಿಗಳು, ಐಟಿ, ಬಿಟಿ ಕಂಪನಿಗಳAತಹ ಖಾಸಗಿ ಕಂಪನಿಗಳನ್ನು ಸರ್ಕಾರದ ಈ ಉಪಕ್ರಮದೊಂದಿಗೆ ಕೈಜೋಡಿಸಲು ಕೋರಲಿದೆ. ಸಿಎಸ್ಆರ್ ನಿಧಿಯಡಿ ಕೋವಿಡ್ ಲಸಿಕೆಗಳನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ನೆರವಾಗುವಂತೆ ಕೋರುತ್ತೇವೆ, ಎಂದು ಡಾ. ಸುಧಾಕರ್ ತಿಳಿಸಿದರು.
“ಈಗಾಗಲೇ ರಾಜ್ಯದಲ್ಲಿ ೩.೫ ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದೇ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿರುವ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮಾಡಲಾಗುತ್ತಿದೆ,” ಎಂದರು.
“ಲಸಿಕೆಗಳ ಒಟ್ಟು ಉತ್ಪಾದನೆಯ ಪೈಕಿ, ಖಾಸಗಿ ಕ್ಷೇತ್ರಕ್ಕೆ ಶೇ.೨೫ ಲಸಿಕೆಗಳ ಸರಬರಾಜನ್ನು ಖಾತ್ರಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ನಾನು ಖಾಸಗಿ ಸಂಸ್ಥೆಗಳೊAದಿಗೆ ಚರ್ಚಿಸುತ್ತಿದ್ದೇನೆ. ಸರ್ಕಾರಕ್ಕೆ ತಮ್ಮ ಸಿಎಸ್ಆರ್ ಕೋಟಾದಡಿ ಲಸಿಕೆಗಳನ್ನು ಖರೀದಿಸಿ ಕೊಡುವಂತೆ ಕೋರುತ್ತಿದ್ದೇವೆ,” ಎಂದರು.
key words : karnataka-to-screen-1-5-crore-children-ahead-of-3rd-wave