ಮೈಸೂರು, ಆ.20, 2021 : (www.justkannada.in news) ಸದ್ಯದ ಶಿಕ್ಷಣ ಪದ್ಧತಿ ಕಾಲಕ್ಕೆ ತಕ್ಕಂತೆ ಇಲ್ಲ. ಇದರಿಂದ ವಿದ್ಯಾರ್ಥಿಗಳ ಏಳಿಗೆ ಮತ್ತು ಶ್ರೇಯೋಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು.
ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ದಿನದ ಕಾರ್ಯಾಗಾರ ಮತ್ತು ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಯಾವುದೇ ಅಡೆತಡೆಗಳು ಇಲ್ಲ. ಇದು ದೇಶದಲ್ಲಿ ದೊಡ್ಡ ಕ್ರಾಂತಿಕಾರಕ ಸುಧಾರಣೆಗೆ ನಾಂದಿ ಹಾಡುತ್ತದೆ. ಸುಸ್ಥಿರ ಅಭಿವೃದ್ಧಿ, ಸ್ವಾವಲಂಬನೆ, ಸ್ಪರ್ಧಾತ್ಮಕತೆಯನ್ನು ಎದುರಿಸಲು ಶಿಕ್ಷಣ ನೀತಿ ಪೂರಕವಾಗಿ ಕೆಲಸ ಮಾಡಲಿದೆ. ವಿಜ್ಞಾನ, ತಂತ್ರಜ್ಞಾನ, ಕೌಶಲ್ಯ ಹಾಗೂ ಆವಿಷ್ಕಾರಗಳಿದ್ದರೆ ಒಂದೊಳ್ಳೆ ಸಮಾಜವನ್ನು ನಿರ್ಮಾಣ ಮಾಡಬಹುದು. ಭೂಮಿ, ಹಣವಷ್ಟೇ ಆಸ್ತಿಯಲ್ಲ. ಬದುಕು ರೂಪಿಸಲು ಉದ್ಯೋಗ ಪಡೆಯಲು ಕೌಶಲ್ಯಗಳು ಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಪ್ರಧಾನ ಪಾತ್ರ ವಹಿಸಲಿದೆ ಎಂದರು.
3ನೇ ವರ್ಷದಿಂದಲೇ ಕಲಿಕೆ :
ಬರೀ ಓದಿನಿಂದ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಿಲ್ಲ. ಜಗತ್ತಿನ ನಾನಾ ದೇಶದಲ್ಲಿ ಸಂಶೋಧನೆ, ತಂತ್ರಜ್ಞಾನ ಹಾಗೂ ಆವಿಷ್ಕಾರದಲ್ಲಿ ಮುನ್ನುಗ್ಗುತ್ತಿವೆ. ಈ ನಿಟ್ಟಿನಲ್ಲಿ ಗುಣಮಟ್ಟ ಶಿಕ್ಷಣ ಇವತ್ತಿನ ತುರ್ತು ಅಗತ್ಯತೆಗಳಲ್ಲಿ ಒಂದು. ಈ ಮೊದಲು ಮಗುವಿಗೆ ಆರು ವರ್ಷವಾದ ನಂತರ ಕಲಿಕೆ ಶುರುವಾಗುತ್ತಿತ್ತು . ಆದರೆ, ನೂತನ ಶಿಕ್ಷಣ ನೀತಿಯಲ್ಲಿ ಮೂರನೇ ವರ್ಷದಲ್ಲೇ ಪ್ರಾರಂಭ ಮಾಡಲಾಗುತ್ತಿದೆ. ಇದರಿಂದ ಮಗು ಶೇ.80ರಷ್ಟು ವಿಷಯವನ್ನು ಬೇಗ ಗ್ರಹಿಸಲು ಸಾಧ್ಯವಾಗುತ್ತದೆ. ಶಾಲೆ ಬಿಟ್ಟ ಮಕ್ಕಳ ಮತ್ತೆ ಕಲಿಕೆಗೆ ವಾಪಸಾಗುತ್ತಿರಲಿಲ್ಲ. ಆದರೆ, ಹೊಸ ನೀತಿ ಡ್ರಾಪ್ ಔಟ್ ಮಕ್ಕಳ ಸಂಖ್ಯೆ ಕಡಿಮೆ ಮಾಡಿ ಮತ್ತೆ ಓದಿನೆಡೆ ಮರಳಲು ಅವಕಾಶ ಮಾಡಿಕೊಡುತ್ತದೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ತಿಮ್ಮೇಗೌಡ ಬಿ., ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ಇತರರು ಇದ್ದರು.
key words : mysore-university-NEP-dr.ashwath.narayan-vc-hemanth-kumar