ಬೆಂಗಳೂರು, ಆಗಸ್ಟ್ 22, 2021 (www.justkannada.in): ಚಳಿಗಾಲದಲ್ಲಿ ಅಧಿವೇಶನದಲ್ಲಿ ಭಾಗವಹಿಸಿದ್ದೆ. ಮಾತಾಡಲು ಅವಕಾಶ ಸಿಗಬಹುದು ಎಂದು ಕೊನೆಯವರೆಗೂ ಕಾದೆ. ಆದರೆ ದುರಂತ ಅಧಿವೇಶನ ನಡೆಯಲು ಬಿಡಲಿಲ್ಲ. ಆಳುವ ಪಕ್ಷ ಮತ್ತು ವಿಪಕ್ಷಗಳ ನಡುವಿನ ತಿಕ್ಕಾಟಕ್ಕೆ ಸದನ ಬಲಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಲಾಟೆ ಇದ್ದರು ಕೇಂದ್ರ ಸರ್ಕಾರ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಿದೆ. ಸಂವಿಧಾನ ತಿದ್ದುಪಡಿ ಬಿಲ್ ಗೆ ಮಾತ್ರ 3 ಗಂಟೆ ಚರ್ಚೆಗೆ ನಿಗಧಿ ಮಾಡಿದ್ದರು. ನಾನು ಅದರಲ್ಲೂ ಭಾಗವಹಿಸಿದ್ದೆ. ಅದನ್ನು ಬಿಟ್ಟು ಯಾವುದರಲ್ಲೂ ನನಗೆ ಮಾತಾಡಲು ಅವಕಾಶವೇ ಸಿಗಲಿಲ್ಲ. ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನವಾಯಿತು ಎಂದು ಮಾಹಿತಿ ನೀಡಿದರು.
ಲೋಕಸಭೆಯಲ್ಲಿ ಬಿಜೆಪಿಗೆ ಶಕ್ತಿ ಇದೆ. ಯಾವುದೇ ಕಾರ್ಯಕಲಾಪ ಇಲ್ಲದೆ ಅಧಿವೇಶನ ನಡೆಯಿತು. ನಾನು ವಿಪಕ್ಷದ ನಾಯಕರಿಗೆ ಕರೆದು ಮಾತಾಡಿದೆ. ಪೆಟ್ರೋಲ್, ಡಿಸೇಲ್ ಸೇರಿದಂತೆ ಜನ ಸಾಮಾನ್ಯರ ಸಮಸ್ಯೆ ಬಗ್ಗೆ ನಾವು ಮಾತಾನಾಡಲು ಆಗಲಿಲ್ಲ. ನನ್ನ ಪ್ರಕಾರದಲ್ಲಿ ಈ ಬಾರಿಯ ಕಲಾಪ ವ್ಯರ್ಥವಾಗಿದೆ. ಈ ತರಹದ ರಾಜ್ಯಸಭೆಯ ನಡಾವಳಿಗಳನ್ನ ಇತಿಹಾಸದಲ್ಲಿ ನಾನು ನೋಡಿರಲಿಲ್ಲ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಹಾಗೂ ನಮ್ಮ ವಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ನನಗೆ ಅಸಮಾಧಾನ ಇದೆ ಎಂದರು.
ಟೇಬಲ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದು ನಾನು ನೋಡಿರಲಿಲ್ಲ. ಸಂಸದರ ಈ ತರಹದ ವರ್ತನೆಗೆ ತೀವ್ರ ನೋವುಂಟಾಗಿದೆ . ಪ್ರಜಾಪ್ರಭುತ್ವ ವ್ಯವಸ್ಥೆ ಹಳಿತಪ್ಪಿದಂತಾಗಿದೆ . ಇದನ್ನ ಸರಿ ಮಾಡಬೇಕಾದ್ರೆ ಎಲ್ಲರು ಸೇರಿಯೇ ಮಾಡಬೇಕು . ಇಂತಹ ವರ್ತನೆಗಳು ಸಮಾಜಕ್ಕೆ ಒಳ್ಳೆ ಲಕ್ಷಣ ಅಲ್ಲ. ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಡುತ್ತಿದ್ದೇವೆ. ಮಹಾನುಭಾವರು ಸ್ವಾತಂತ್ರ್ಯ ತಂದು ಕೊಟ್ಟರು. ಅನೇಕರು ದೇಶಕ್ಕೆ ಆತ್ಮ ಅರ್ಪಣೆ ಮಾಡಿಕೊಂಡಿದ್ದಾರೆ ಇನ್ನು ಮುಂದಾದರು ಇದನ್ನು ನಾವು ಅರಿತು ಕೊಳ್ಳಬೇಕಾಗಿದೆ . ನಾವು ನಮ್ಮ ಪಕ್ಷದ ಚಟುವಟಿಕೆಗಳನ್ನ ಮುಂದುವರೆಸುತ್ತೇವೆ. ಶೀಘ್ರವೇ ಪಕ್ಷದ ನಾಯಕರ ಜೊತೆ ಸಭೆ ಮಾಡಿ ಮುಂದಿನ ತೀರ್ಮಾನ ಮಾಡ್ತೀವಿ ಎಂದರು.
ಮೇಕೆದಾಟು ವಿಚಾರವಾಗಿ ಕೂಡ ಹೋರಾಟ ಮಾಡ್ತೀವಿ. ಮಹದಾಯಿ ವಿಚಾರವನ್ನು ಬಿಡುವುದಿಲ್ಲ. ನಮ್ಮ ಪಕ್ಷ ಹೋರಾಟ ಮಾಡುತ್ತೆ. ನಮ್ಮ ಜೀವನದಿಗಳಾದ ಕೃಷ್ಣ ಮೇಲ್ಡಂಡೆ, ಮೇಕದಾಟು, ಮಹದಾಯಿ ವಿಚಾರವಾಗಿ ಜೆಡಿಎಸ್ ನಿಂದ ಹೋರಾಟ ನಿರಂತರವಾಗಿರುತ್ತದೆ. ಪಾದಯಾತ್ರೆ ಮೂಲಕ ಹೋರಾಟ ಮಾಡಲು ಜೆಡಿಎಸ್ ತೀರ್ಮಾನ ಮಾಡುತ್ತೇವೆ , ಈ ಹೋರಾಟದ ಬಗ್ಗೆ ಇದೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದರು.
ಸುದ್ದಿಘೋಷ್ಠಿಗೂ ಮುನ್ನ ಇಂದು ರಾಖಿ ಹಬ್ಬದ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಪಕ್ಷದ ಕಾರ್ಯಕರ್ತೆಯರು ರಾಖಿ ಕಟ್ಟಿದರು.