ಕಾರ್ಡ್‌’ ಕೊಟ್ಟೂ “ಸ್ಮಾರ್ಟ್‌’ ಆಗದ ಬಿಎಂಟಿಸಿ

ಬೆಂಗಳೂರು:ಜುಲೈ-20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿದ್ಯಾರ್ಥಿಗಳಿಗೆ ನೀಡಿರುವ ರಿಯಾಯ್ತಿ ಪಾಸುಗಳನ್ನು “ಸ್ಮಾರ್ಟ್‌ ಕಾರ್ಡ್‌’ ಪರಿಚಯಿಸುವ ಮೂಲಕ ಹೈಟೆಕ್‌ ಮಾಡಿದೆ. ಆದರೆ, ವರ್ಷ ಕಳೆದರೂ ಅವುಗಳನ್ನು ದೃಢೀಕರಿಸುವ ವ್ಯವಸ್ಥೆ ಮಾಡುವುದನ್ನು ಮರೆತಿದೆ. ಇದರಿಂದ ಕಾರ್ಡ್‌ಗಳ ದುರ್ಬಳಕೆ ಆಗುತ್ತಿದ್ದು, ಸಂಸ್ಥೆಗೆ ನಷ್ಟದ ರೂಪದಲ್ಲಿ ಇದು ಪರಿಣಮಿಸುತ್ತಿದೆ.

ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಚಿಪ್‌ ಅಳವಡಿಸಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳ ತರಗತಿ, ಪಾಸು ವಿತರಣೆಯಾದ ದಿನ ಮತ್ತು ಪೂರ್ಣಗೊಳ್ಳುವ ದಿನಾಂಕ, ಸಂಚರಿಸುವ ಮಾರ್ಗ (ಎಲ್ಲಿಂದ-ಎಲ್ಲಿಗೆ)ದ ವಿವರವೆಲ್ಲವೂ ಇರುತ್ತದೆ. ಆದರೆ, ಆ “ಚಿಪ್‌’ ಅನ್ನು ರೀಡ್‌ ಮಾಡುವ ಯಂತ್ರಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡಬಹುದು. ಅಷ್ಟೇ ಅಲ್ಲ, ನಕಲಿ ಕಾರ್ಡ್‌ಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತಿದೆ.

ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ ಕಾರ್ಡ್‌ ಇರುತ್ತದೆ. ಆದರೆ, ಅದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿಯುವ ಸೌಲಭ್ಯ ನಿರ್ವಾಹಕರ ಬಳಿ ಇಲ್ಲ. ಇದಲ್ಲದೆ, ಅದನ್ನು ಬಳಕೆ ಮಾಡುವ ವಿದ್ಯಾರ್ಥಿಗಳು ನಿಗದಿಪಡಿಸಿದ ಮಾರ್ಗದಲ್ಲೇ ಸಂಚರಿಸುತ್ತಿದ್ದಾರೆಯೋ ಅಥವಾ ನಿಯಮ ಉಲ್ಲಂ ಸಿ ಅನ್ಯಮಾರ್ಗಗಳಲ್ಲಿ ಓಡಾಡುತ್ತಿದ್ದಾರೆಯೋ ಎಂಬುದು ಕೂಡ ಗೊತ್ತಾಗುವುದಿಲ್ಲ. ಸ್ವತಃ ಟಿಕೆಟ್‌ ಚೆಕಿಂಗ್‌ ಇನ್‌ಸ್ಪೆಕ್ಟರ್‌ಗೂ ಇದು ಗೊತ್ತಾಗುವುದಿಲ್ಲ. ಹೆಚ್ಚು-ಕಡಿಮೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಇದು ಮುಂದುವರಿದಿದ್ದು, ನಿಗಮಕ್ಕೆ ಲಕ್ಷಾಂತರ ರೂ. ನಷ್ಟ ಆಗುತ್ತಿದೆ.

ವರ್ಷಕ್ಕೆ ಮೂರೂವರೆಯಿಂದ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದೆ. ಈ ಪೈಕಿ ಈಗಾಗಲೇ 2.32 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 1.25 ಲಕ್ಷ ವಿದ್ಯಾರ್ಥಿಗಳಿಗೆ ಕಾರ್ಡ್‌ಗಳ ವಿತರಣೆ ಆಗಿದೆ. ಒಂದು ವಿದ್ಯಾರ್ಥಿ ಪಾಸಿನಿಂದ ವಾರ್ಷಿಕ ಸರಾಸರಿ 10,833 ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ (ಹತ್ತು ತಿಂಗಳಿಗೆ). ಅಂದರೆ ದಿನಕ್ಕೆ ಒಬ್ಬ ವಿದ್ಯಾರ್ಥಿಗೆ 36.11 ರೂ. ಆಗುತ್ತದೆ. ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಈ ಮೊತ್ತ 1.44 ಕೋಟಿ ರೂ. ಆಗುತ್ತದೆ. ಇದರಲ್ಲಿ ಶೇ.25ರಷ್ಟು ದುರ್ಬಳಕೆಯಾದರೂ ಲಕ್ಷಾಂತರ ರೂ. ಆಗುತ್ತದೆ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಅಪ್ಲಿಕೇಷನ್‌ ಅಭಿವೃದ್ಧಿ: ಇನ್ನು ಬಿಎಂಟಿಸಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ಸಂಖ್ಯೆ ಸುಮಾರು ಆರು ಸಾವಿರ ಇದ್ದು, ಶೇ.30ರಷ್ಟು ಬಸ್‌ಗಳಲ್ಲಿ “ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌’ (ಇಟಿಎಂ)ಗಳಿಲ್ಲ. ಇದ್ದರೂ ಅವುಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ಸ್ಮಾರ್ಟ್‌ ಕಾರ್ಡ್‌ನಲ್ಲಿಯ ಚಿಪ್‌ಗ್ಳನ್ನು ಮೌಲ್ಯಮಾಪನ ಮಾಡಿ, ವಿಶ್ಲೇಷಿಸುವ ಸೌಲಭ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಚಿಪ್‌ ರೀಡ್‌ ಮಾಡುವಂತಹ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಇದನ್ನು ಅಳವಡಿಸುವ ಕೆಲಸ ಬಾಕಿ ಇದೆ. ಅಂದರೆ, ಇನ್ನೂ ಎರಡು-ಮೂರು ತಿಂಗಳು ಈ ನಷ್ಟದ ಬಾಬ್ತು ತಪ್ಪಿದ್ದಲ್ಲ!

ಅದೇನೇ ಇರಲಿ, ಇತ್ತೀಚೆಗಷ್ಟೇ ಸ್ಮಾರ್ಟ್‌ ಕಾರ್ಡ್‌ಗಳನ್ನು ನವೀಕರಿಸಲಾಗಿದ್ದು, ಅದರಲ್ಲಿ ರದ್ದಾಗಿರುವುದು, ಸ್ಥಗಿತಗೊಂಡಿರುವುದು, ಅವಧಿ ಮುಗಿದವುಗಳನ್ನು ತೆಗೆದುಹಾಕಲಾಗಿದೆ. ಅಷ್ಟಕ್ಕೂ ಸಾಮಾನ್ಯವಾಗಿ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಂದ ಈ ದುರ್ಬಳಕೆ ತುಂಬಾ ಕಡಿಮೆ. ಬೆಳಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲೇ ಇರುತ್ತಾರೆ. ಆದರೆ, ಕಾಲೇಜುಗಳು ಮಧ್ಯಾಹ್ನದ ಹೊತ್ತಿಗೇ ಮುಗಿಯುವುದರಿಂದ ಅಂತಹ ಕಡೆ ದುರ್ಬಳಕೆ ಸಾಧ್ಯತೆ ಹೆಚ್ಚು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ನಕಲಿ ಹಾವಳಿ ಎಲ್ಲಿ?: ಹೊಸ ಸ್ಮಾರ್ಟ್‌ ಕಾರ್ಡ್‌ಗಳಿಗೆ 200 ರೂ. ಸೇವಾ ಶುಲ್ಕ ಪಡೆಯಲಾಗುತ್ತಿದೆ. ಇದರೊಂದಿಗೆ ಪಾಸಿನ ಶುಲ್ಕ ಕೂಡ ಆಯಾ ತರಗತಿಗೆ ತಕ್ಕಂತೆ ಇರುತ್ತದೆ. ಆದರೆ, ದಾಸರಹಳ್ಳಿ, ಯಶವಂತಪುರ, ಪೀಣ್ಯ ಮತ್ತಿತರ ಕಡೆಗಳಲ್ಲಿರುವ ಸೈಬರ್‌ ಸೆಂಟರ್‌ನಂತಹ ಮಳಿಗೆಗಳಲ್ಲಿ ಈ ನಕಲಿ ಕಾರ್ಡ್‌ಗಳ ಹಾವಳಿ ಕಂಡುಬರುತ್ತಿದೆ. ಕೇವಲ 80-100 ರೂ.ಗಳಿಗೆ ಲಭ್ಯವಾಗುತ್ತಿವೆ ಎಂಬ ದೂರುಗಳು ಬಿಎಂಟಿಸಿ ಘಟಕಗಳಿಗೆ ಬರುತ್ತಿವೆ.

ಇಟಿಎಂಗಳ ಅಲಭ್ಯತೆ; ಲಾಭ-ನಷ್ಟ: ಇಟಿಎಂಗಳ ಅಲಭ್ಯತೆಯು ಕೆಲ ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದರೆ, ಇನ್ನು ಹಲವರಿಗೆ ಜೇಬು ತುಂಬಿಸಲು ದಾರಿ ಮಾಡಿಕೊಟ್ಟಿವೆ. ಹೌದು, ಇಟಿಎಂಗಳಿಂದ ಟಿಕೆಟ್‌ ವಿತರಣೆ ತ್ವರಿತವಾಗಿ ಆಗುತ್ತಿತ್ತು. “ಪೀಕ್‌ ಅವರ್‌’ನಲ್ಲಿ ಬಸ್‌ಗಳು ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದರೂ ಒಂದು ನಿಲ್ದಾಣದಿಂದ ಮತ್ತೂಂದು ನಿಲ್ದಾಣ ಬರುವಷ್ಟರಲ್ಲಿ ಟಿಕೆಟ್‌ ಹಂಚಿಕೆ ಕಾರ್ಯ ಮುಗಿಯುತ್ತಿತ್ತು.

ಈ ಡಿಜಿಟಲ್‌ ವ್ಯವಸ್ಥೆಯಲ್ಲಿ ವಂಚನೆಗೆ ಅವಕಾಶವೂ ಇರಲಿಲ್ಲ. ಆದರೆ, ಈಗ ಮ್ಯಾನ್ಯುವಲ್‌ ಆಗಿ ವಿತರಣೆ ಮಾಡುವುದು ಕಿರಿಕಿರಿ ಆಗಿದೆ. ಕೆಲವರಿಗೆ ಟಿಕೆಟ್‌ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಚೆಕಿಂಗ್‌ ಇನ್‌ಸ್ಪೆಕ್ಟರ್‌ ಕೆಂಗಣ್ಣಿಗೂ ಗುರಿಯಾಗಬೇಕಾಗಿದೆ. ಇದೇ ಭಯಕ್ಕೆ ಹೆಚ್ಚು ದಟ್ಟಣೆ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿಕ್ಕೂ ಹಿಂದೇಟು ಹಾಕಲಾಗುತ್ತಿದೆ ಎಂದು ಸ್ವತಃ ನಿರ್ವಾಹಕರು ಅಲವತ್ತುಕೊಂಡರು.

ಈ ಮಧ್ಯೆ ಮತ್ತೂಂದೆಡೆ ಟಿಕೆಟ್‌ ಮರುಹಂಚಿಕೆಗೂ ಅನುವುಮಾಡಿಕೊಟ್ಟಂತಾಗಿದೆ. ಅಂದರೆ ನಿರ್ವಾಹಕ, ಸಾಮಾನ್ಯವಾಗಿ ಟಿಕೆಟ್‌ ವಿತರಣೆ ಮಾಡಿದ ನಂತರ ಪ್ರಯಾಣಿಕರಿಗೆ ಬಾಕಿ ನೀಡಬೇಕಾದ ಚಿಲ್ಲರೆ ಮೊತ್ತವನ್ನು ಅದೇ ಟಿಕೆಟ್‌ ಹಿಂದೆ ಬರೆಯುತ್ತಾನೆ. ತದನಂತರ ಪ್ರಯಾಣಿಕ ಇಳಿಯುವಾಗ ಆ ಟಿಕೆಟ್‌ ಪಡೆದು, ಚಿಲ್ಲರೆ ನೀಡುತ್ತಾನೆ. ಅದೇ ಟಿಕೆಟ್‌ ಅನ್ನು ಮತ್ತೂಬ್ಬ ಪ್ರಯಾಣಿಕನಿಗೆ ವಿತರಿಸುತ್ತಾನೆ. ಇದು ಕೂಡ ಆದಾಯ ಸೋರಿಕೆಗೆ ಕಾರಣವಾಗುತ್ತಿದೆ. ಯಾಕೆಂದರೆ ಈ ಮಾದರಿಯ ಟಿಕೆಟ್‌ನಲ್ಲಿ ಸಮಯ, ಮಾರ್ಗ ಮತ್ತಿತರ ಮಾಹಿತಿ ಇರುವುದೇ ಇಲ್ಲ.

ಸ್ಮಾರ್ಟ್‌ ಕಾರ್ಡ್‌ಗಳಲ್ಲಿರುವ ಚಿಪ್‌ ರೀಡ್‌ ಮಾಡುವ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲಾಗಿದ್ದು, ಒಂದೆರಡು ತಿಂಗಳಲ್ಲಿ ಇಟಿಎಂಗಳು ಮತ್ತು ಅವುಗಳಲ್ಲಿ ಈ ನೂತನ ಅಪ್ಲಿಕೇಷನ್‌ಗಳ ವ್ಯವಸ್ಥೆ ಬರಲಿದೆ. ಅಷ್ಟೊತ್ತಿಗೆ ಎಲ್ಲ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸುವ ಪ್ರಕ್ರಿಯೆಯೂ ಮುಗಿದಿರುತ್ತದೆ. ಹಾಗಾಗಿ, ಸಮಸ್ಯೆ ಅಷ್ಟಾಗಿ ಆಗದು.
-ಎನ್‌.ವಿ.ಪ್ರಸಾದ್‌, ಬಿಎಂಟಿಸಿ ಎಂ.ಡಿ
ಕೃಪೆ: ಉದಯವಾಣಿ

ಕಾರ್ಡ್‌’ ಕೊಟ್ಟೂ “ಸ್ಮಾರ್ಟ್‌’ ಆಗದ ಬಿಎಂಟಿಸಿ
cards-give-smart-to-let-go-of-bmtc