ಬೆಂಗಳೂರು,ಸೆಪ್ಟಂಬರ್,16,2021(www.justkannada.in): ವಿಧಾನಸಭೆ ಕಲಾಪದಲ್ಲಿಂದು ಬೆಲೆ ಏರಿಕೆಯ ಬಗ್ಗೆ ಸರ್ಕಾರದ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗುಡುಗಿದರು.
ಇಂದು ವಿಧಾನಸಭೆಯಲ್ಲಿ ಬೆಲೆ ಏರಿಕೆ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಈಗ ಆಡಳಿತ ಪಕ್ಷ, ಮಾಜಿ ಆಡಳಿತ ಪಕ್ಷ, ವಿರೋಧ ಪಕ್ಷ, ಮಾಜಿ ವಿರೋಧ ಪಕ್ಷ,ವಿರೋಧ ಪಕ್ಷ, ಮುಂಬರುವ ಆಡಳಿತ ಪಕ್ಷ, ಮುಂಬರುವ ವಿರೋಧಪಕ್ಷ ಅಂಥ ಆಗಿದೆ. ಸದನದಲ್ಲಿನ ನಮ್ಮ ಸದಸ್ಯರಲ್ಲಿ ಎಷ್ಟು ಮಂದಿಗೆ ಬೆಲೆ ಏರಿಕೆ ಬಿಸಿ ತಟ್ಟಿರ ಬಹುದು? ಸತ್ಯ ಮಾತನಾಡಲು ನಾವು ಸತ್ತಿದ್ದೇವೆ. ಬದುಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದರದ್ದು ಬೆಲೆ ಏರಿಕೆ ಆಗಿದೆ ಎಂದು ನಿರ್ಧಾರ ಆಗಬೇಕಲ್ಲ. ಬೆಲೆ ಏರಿಕೆಯಾಗಿದ್ದು ಪೆಟ್ರೋಲ್ ದ್ದಾ, ಡೀಸೆಲ್ ದ್ದಾ, ಟೀ ಪುಡಿಯದ್ದಾ, ಅಕ್ಕಿಯದ್ದಾ, ಬೇಳೆ ಕಾಳಿನದ್ದಾ..? ಎಂದ ರಮೇಶ್ ಕುಮಾರ್, ಕೋವಿಡ್ ಆಸ್ಪತ್ರೆಗಳಲ್ಲಿ ಒಂದೊಂದು ದರ ವಿಧಿಸುತ್ತಿವೆ. ಹೆಣ ಕೊಡುವುದಿಲ್ಲ. ಶಾಸನದ ಭಯ ಇಲ್ಲ. ಜನ ಏನು ತಿಳಿದುಕೊಳ್ಳುತ್ತಾರೆ ಎಂಬ ಭಯ ಇಲ್ಲ. ನಾವೆಲ್ಲ ಸ್ವಂತ ಹೆಲಿಕಾಪ್ಟರ್ ಹೊಂದಿದ್ದೇವೆ. ಈ ಸದನದಲ್ಲಿ ಇರುವ ಸದಸ್ಯರಲ್ಲಿ ಆವತ್ತು ಐದಾರು ಮಂದಿಗೆ ಮಾತ್ರ ಕಾರಿತ್ತು. ಬಹುತೇಕರು ನಾವು ಬಸ್ ನಲ್ಲಿ ಬರುತ್ತಿದ್ದೆವು. ನಮ್ಮ ಬೆಲೆ ಏರಿಕೆ ಎಷ್ಟಾಗಿದೆ ಎಂಬುದನ್ನು ನೋಡಬೇಕು. ನಾವು ಇಲ್ಲಿ ಬರಲು ಎಷ್ಟು ಬೆಲೆ ನೀಡಿದ್ದೇವೆ, ಬಂದ ಮೇಲೆ ಎಷ್ಟು ಬೆಲೆ ನಿಗದಿಯಾಗಿದೆ? ಎಂದು ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿಯಾಗಿದ್ದರೆ ಸ್ಲಂ ಬೋರ್ಡ್ ಏಕಿದೆ? ಬೆಂಗಳೂರಲ್ಲಿ ಸ್ಲಂ ಇರಬೇಕು, ಸ್ಲಂ ಬೋರ್ಡ್ ಕೂಡ ಇರಬೇಕು. ಫೈ ಸ್ಟಾರ್ ಹೋಟೇಲ್ ಗಳೂ ಇವೆ. ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಆದ್ಯತೆ ಅಲ್ಲ. ಪೆಟ್ರೋಲ್ ಬಂಕ್ ನಮ್ಮ ಆದ್ಯತೆಯಾಗಿದೆ. ಈ ದೇಶ ಡಂಪಿಂಗ್ ಯಾರ್ಡ್ ಆಗಿದೆ. ಬೆಲೆ ಏರಿಕೆಯ ಅಪರಾಧಿಗಳು ನಾವು. ಸಾರ್ವಜನಿಕ ಸಂಬಂಧಿತ ಕಡತಗಳು ಅಲ್ಲೇ ಮಲಗಿರುತ್ತವೆ. ಭ್ರಷ್ಟ ವ್ಯವಸ್ಥೆಗೆ ನಾವೆಲ್ಲ ಹೊಣೆಯಾಗಿದ್ದೇವೆ. ಮೈಕ್ ಒಂದೇ ಸರತಿ ಬದಲಾಯಿಸುತ್ತೇವೆ ಅಷ್ಟೇ. ಹಿಂದೆ ನಾವು ಹೇಳಿದ್ದೇವೆ. ಇಂದು ನೀವು ಹೇಳುತ್ತೀರ. ಅಂಕಿ ಅಂಶ ಬದಲಾಗಿರುತ್ತದೆ. ಇವತ್ತು ದೇಶ ವ್ಯಾಪಾರಿಗಳ ಕೈಗೆ ಹೋಗಿದೆ. ವ್ಯಾಪರ ಅಂದರೆ ಲಾಭ. ನಾವು ಇಂದು ಅದರ ಪರಿಣಾಮ ಎದುರಿಸುತ್ತಿದ್ದೇವೆ ಎಂದು ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
Key words: Former Speaker -Ramesh Kumar – against -government -price hike