ಮೈಸೂರು ಜಿಲ್ಲೆಯ ಕುಗ್ರಾಮದ ಹುಡುಗ ಇದೀಗ ಐಐಟಿ ಗುವಾಹಟಿಯ ಸಂಶೋಧನಾ ವಿದ್ಯಾರ್ಥಿ

ಮೈಸೂರು: ಅದು ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ಎಚ್.ಡಿ.ಕೋಟೆ ತಾಲೂಕಿನ ಕೊಡಚನಮಾಳ ಗ್ರಾಮ. ದಟ್ಟವಾದ ನಾಗರಹೊಳೆ ಅರಣ್ಯದೊಳಗೆ ಸೀಮಿತ ಸಂಪರ್ಕವನ್ನು ಮಾತ್ರ ಈ ಊರು ಹೊಂದಿದೆ. ರಸ್ತೆ, ೆನ್, ಆರೋಗ್ಯ, ವಿದ್ಯಾಭ್ಯಾಸಕ್ಕೆ ಮೂಲ ಸೌಲಭ್ಯಗಳ ಕೊರತೆ. ಇಂತಹ ಊರಿನಿಂದ ಬಂದ ಹುಡುಗನೊಬ್ಬ ಇದೀಗ ಅಸ್ಸಾಂನ ಗುವಾಹಟಿಯ ಐಐಟಿಗೆ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ ಮಾಡಲು ಆಯ್ಕೆಯಾಗಿದ್ದಾನೆ.

ಹೌದು! ಡಿಬಿ ಕುಪ್ಪೆ ಹೋಬಳಿಯ ನಂಜೇಗೌಡ ಹಾಗೂ ಶಾರದಾ ದಂಪತಿಯ ಮಗನಾದ ಮಣಿಯ ವಿ.ಎನ್. ಇದೀಗ ತನ್ನೂರಿನಲ್ಲಿ ಹೊಸ ಕನಸುಗಳನ್ನು ಬಿತ್ತಿದ್ದಾನೆ. ಅವನು ಹಾಕಿಕೊಟ್ಟ ಹಾದಿಯಲ್ಲಿ ಬರಲು ನೂರಾರು ಮಕ್ಕಳು ಕನಸುಗಣ್ಣಿನಿಂದ ಕಾಯುತ್ತಿದ್ದಾರೆ. ಕೊಡಚನಮಾಳ ಗ್ರಾಮದಲ್ಲಿ 80 ಮನೆಗಳಷ್ಟೇ ಇವೆ. ಇಲ್ಲಿ ಶಿಕ್ಷಣ ಬೆಳಕು ಮಸುಕಾಗಿದೆ. ಸದ್ಯ ಆ ಊರಿನ ಹೊಸ ಭರವಸೆಯಾಗಿ ಮಣಿಯ ಗೋಚರಿಸಿದ್ದಾನೆ. ಇವನ ತಂದೆ, ತಾಯಿ ಕೃಷಿಕರು. ವರ್ಷಪೂರ್ತಿ ಕೆಲಸ ಇಲ್ಲದಿದ್ದಾಗ ಕೂಲಿ ಕಾರ್ಮಿಕರಾಗಿ ಬೇರೆಯವರ ಜಮೀನಿಗೂ ಹೋಗುತ್ತಾರೆ. ಬಡತನದಲ್ಲಿ ಹುಟ್ಟಿ ಬೆಳೆದ ಮಣಿಯ ಸತತ ಪರಿಶ್ರಮ, ಛಲದಿಂದ ಇದೀಗ ಊರಿನ ಶಿಕ್ಷಣದ ಬೆಳಕಾಗಿ ಕಂಗೊಳಿಸುತ್ತಿದ್ದಾನೆ. ಐಐಟಿಗೆ ಹೋದ ಗ್ರಾಮದ ಮೊದಲಿಗ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.

ಕಲಾ ವಿಭಾಗಕ್ಕೆ ಸೇರ ಬಯಸಿದ್ದ
ಎಸ್ಸೆಸ್ಸೆಲ್ಸಿವರೆಗೆ ಡಿಬಿ ಕುಪ್ಪೆಯಲ್ಲೇ ವ್ಯಾಸಂಗ ಮಾಡಿದ ಮಣಿಯ ನಂತರ ಪಿಯುಸಿ ಮಾಡಲು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿಕೊಂಡ. 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದ ಮಣಿಯನಿಗೆ ಪ್ರಾರಂಭಿಕ ದಿನಗಳಲ್ಲಿ ವಿಜ್ಞಾನ ಕಬ್ಬಿಣದ ಕಡಲೆಯಾಯಿತು. ಒಂದು ಹಂತದಲ್ಲಿ ವಿಜ್ಞಾನ ಬಿಟ್ಟು ಕಲಾ ವಿಷಯಕ್ಕೆ ಸೇರಿಕೊಳ್ಳಲು ಮನಸ್ಸು ಮಾಡಿದ್ದಘಿ. ಆದರೆ, ಓದಬೇಕೆಂಬ ಅವನ ಛಲದ ಮುಂದೆ ಅವೆಲ್ಲವೂ ನಗಣ್ಯವಾಯಿತು. ಜೊತೆಗೆ ಪಿಯುಸಿಯನ್ನು ಶೇ. 84 ಅಂಕದೊಂದಿಗೆ ತೇರ್ಗಡೆಯಾದ ಮೇಲೆ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿಗೆ ದಾಖಲಾದ. ನಂತರ ಮಾನಸಗಂಗೋತ್ರಿಯಲ್ಲಿ ರಾಸಾಯನಿಕ ಶಾಸದಲ್ಲಿ ಎಂಎಸ್ಸಿ ಮುಗಿಸಿದ.

ಕೈ ಹಿಡಿದ ವೀ-ಲೀಡ್
ಮಣಿಯನಲ್ಲಿರುವ ಓದುವ ಆಸಕ್ತಿ ಗುರುತಿಸಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅವನಿಗೆ ನೀರೆರೆದು ಪೋಷಿಸಿದರು. ವೀ-ಲೀಡ್ ಪ್ರತಿವರ್ಷ ಸಾಮಾನ್ಯ ಪರೀಕ್ಷೆ ಮೂಲಕ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತದೆ. ಮಣಿಯ ಕೂಡ ಪರೀಕ್ಷೆ ಪಾಸು ಮಾಡಿ ಉಚಿತವಾಗಿ ಪಿಯುಸಿಗೆ ತರಬೇತಿ ಪಡೆದ. ಅಲ್ಲದೆ, ಓದಲು ಸಹಕಾರಿಯಾಗಲಿ ಎಂದು ಸಂಸ್ಥೆಯವರೇ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿಕೊಟ್ಟರು.

4 ಐಐಟಿಗೆ ಆಯ್ಕೆ
ಐಐಟಿಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ಬುದ್ಧಿವಂತಿಕೆ ಬೇಕು. ಗೇಟ್ ಅಥವಾ ಸಿಎಸ್‌ಐಆರ್-ಎನ್‌ಇಟಿ ಪರೀಕ್ಷೆ ಪಾಸು ಮಾಡಿರಬೇಕು. ಮಣಿಯ ಎರಡು ಪರೀಕ್ಷೆ ಪಾಸು ಮಾಡಿದ್ದಾನೆ. ಪರಿಣಾಮ ಹೈದರಾಬಾದ್ ಐಐಟಿ, ಧಾರವಾಡ ಐಐಟಿ, ಎನ್‌ಐಎಸ್‌ಇಆರ್ ಭುವನೇಶ್ವರ್, ಐಐಟಿ ಗುವಾಹಟಿಗೆ ಸೇರಿ 4 ಐಐಟಿಗೆ ಆಯ್ಕೆಯಾಗಿದ್ದರು.

ದಾನಿಗಳ ನೆರವು ಬೇಕು
ಐಐಟಿಯಲ್ಲಿ ಸಂಶೋಧನೆ ಮಾಡಲು ಮಣಿಯಗೆ ೆಲೋಶಿಪ್ ಸಿಗುತ್ತದೆ. ಆದರೆ, ಅದು ಬರಲು ಇನ್ನೂ 8-10 ತಿಂಗಳು ಬೇಕು. ಮೊದಲ ಸೆಮಿಸ್ಟರ್‌ಗೆ 50 ಸಾವಿರ ರೂ. ಕಟ್ಟಬೇಕಿತ್ತು. ಆದರೆ, ಮಣಿಯನ ಆರ್ಥಿಕ ಸಂಕಷ್ಟ ಕಂಡು ಸ್ವತಃ ಈತನ ಗುವಾಹಟಿ ಪಿಎಚ್.ಡಿ ಮಾರ್ಗದರ್ಶಕರೇ ಹಣ ಭರಿಸಿದ್ದಾರೆ. ಆ ಹಣವನ್ನು ಇನ್ನೂ ವಾಪಸ್ ನೀಡಿಲ್ಲಘಿ. ಇಂತಹ ಪ್ರತಿಭಾನ್ವಿತ ಮಣಿಯಗೆ ದಾನಿಗಳ ನೆರವು ಸಿಕ್ಕರೆ ಮತ್ತಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ.


ಸರಕಾರಿ ಶಾಲೆಯಲ್ಲಿ ಓದಿ ಸ್ಕಾಲರ್‌ಶಿಪ್ ಪಡೆದು ಇದೀಗ ಐಐಟಿಯಲ್ಲಿ ಸಂಶೋಧನೆ ಮಾಡಲು ಮಣಿಯ ಆಯ್ಕೆ ಆಗಿರುವುದು ನಿಜಕ್ಕೂ ಸಂತಸದ ವಿಷಯ. ಗ್ರಾಮೀಣ ಮಕ್ಕಳಿಗೆ ಮಣಿಯ ಸಾಧನೆ ನಿಜಕ್ಕೂ ಸ್ಫೂರ್ತಿ ಸೆಲೆ.
– ಡಾ.ಆರ್.ಬಾಲಸುಬ್ರಮಣ್ಯಂ, ಸಂಸ್ಥಾಪಕರು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್

ನಮ್ಮೂರಿಗೆ ಬಸ್ ಸೌಲಭ್ಯ ಇಲ್ಲಘಿ. ವಿದ್ಯಾಭ್ಯಾಸಕ್ಕೂ ಅಷ್ಟು ಪೋತ್ಸಾಹ ಇಲ್ಲಘಿ. ವೀ-ಲೀಡ್ ಎರಡು ವರ್ಷ ಉಚಿತ ತರಬೇತಿ ನೀಡಿತು. ಹೆಚ್ಚಿನ ಸೌಲಭ್ಯ ಸಿಕ್ಕರೆ ನನ್ನೂರಿನಲ್ಲೂ ಸಾಕಷ್ಟು ಮಂದಿ ಶಿಕ್ಷಿತರಾಗಲು ಅವಕಾಶವಿದೆ.
– ಮಣಿಯ ವಿ.ಎನ್., ಐಐಟಿಗೆ ಆಯ್ಕೆಯಾದ ಸಂಶೋಧನಾ ವಿದ್ಯಾರ್ಥಿ

ಕೃಪೆ: ನಾಗರಾಜ್ ನವೀಮನೆ,  ವಿಜಯ ಕರ್ನಾಟಕ