ಮೈಸೂರು,ಜು,24,2019(www.justkannada.in): ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಿರವಾಗಿ ನಿಲ್ಲಲಿದೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ,ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಒಂದು ಹಂತಕ್ಕೆ ಬರಲಿದೆ. ನಮ್ಮ ಮೊದಲ ಕಮಿಮ್ಮೆಂಟ್ ರೈತರ ಸಾಲಮನ್ನಾ ಬಗ್ಗೆ ಚರ್ಚೆ ನಡೆಸೋದು. ಬಿಎಸ್‌ವೈ ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ. ಬಿಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ಜೊತೆ ಚರ್ಚಿಸಿ ಸಂಪುಟ ರಚನೆ ಮಾಡ್ತಾರೆ ಎಂದರು.
ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಆರ್.ಎಸ್.ಎಸ್‌ನಿಂದ ನಾವು ಸಲಹೆ ಮಾತ್ರ ಪಡೆಯುತ್ತೇವೆ. ಆರ್.ಎಸ್.ಎಸ್ ಏನು ಹೇಳಿದ್ದಾರೆ ಅಂತ ಮಾಧ್ಯಮದವರು ಹೇಳೋದನ್ನ ನಾನು ನಂಬುವುದಿಲ್ಲ. ಸ್ಪೀಕರ್ ಬದಲಾವಣೆ ಬಗ್ಗೆ ನಾಯಕರ ಜತೆ ಕುಳಿತು ಚರ್ಚೆ ಮಾಡುತ್ತೇವೆ. ಆ ನಂತರ ಹೊಸ ಸ್ಪೀಕರ್, ಹಳೆ ಸ್ಪೀಕರ್ ಮುಂದುವರಿಕೆ ಬಗ್ಗೆ ತಿರ್ಮಾನ ಮಾಡಲಾಗುತ್ತದೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಆಗಿರಲಿಲ್ಲ. ಅದು ದುಶ್ಮನ್ ಸರ್ಕಾರ ಆಗಿತ್ತು. ಲೋಕಸಭೆಯಲ್ಲೇ ಅವರ ದೋಸ್ತಿ ಏನಾಗುತ್ತೆ ಅಂತ ಗೊತ್ತಾಯ್ತು ಬಿಡಿ. ಡಿಕೆ ಶಿವಕುಮಾರ್ ಮಾಧ್ಯಮ, ಪತ್ರಿಕೆಗಳ ಮುಂದೆ ಮಾತ್ರ ಟ್ರಬಲ್ ಶೂಟರ್. ಜನರು ಅವರನ್ನ ಟ್ರಬಲ್ ಶೂಟರ್ ಅನ್ನಬೇಕು ಆಗ ಮಾತ್ರ ಲಿಡರ್ ಆಗೋದು. ಇವರೆಲ್ಲಾ ಸ್ವಯಂ ಘೋಷಿತ ಲಿಡರ್‌ಗಳು ಎಂದು ಲೇವಡಿ ಮಾಡಿದರು.
ಅತೃಪ್ತ ಶಾಸಕರನ್ನ ತಮ್ಮ ಪಕ್ಷಕ್ಕೆ ಆಹ್ವಾನಿಸಿದ ಕೆ.ಎಸ್ ಈಶ್ವರಪ್ಪ, ಅತೃಪ್ತರು ನಮ್ಮ ಪಕ್ಷಕ್ಕೆ ಬಂದ್ರೆ ಸ್ವಾಗತ. ಆದ್ರೆ ಯಾರನ್ನು ಬಲವಂತ ಮಾಡಿ ಕರೆಯೋಲ್ಲ. ಬಿಜೆಪಿ ಸರ್ಕಾರ ಸ್ಥಿರ ಸರ್ಕಾರವಾಗಿ ನಿಲ್ಲಲಿದೆ ಎಂದರು.
Key words: BJP- stand – stable government- MLA -KS Eshwarappa -confident -Mysore