ಬೆಂಗಳೂರು, ಅಕ್ಟೋಬರ್ 11,2021(www.justkannada.in): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ,ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿ ಸಚಿವ ಸುನೀಲ್ ಕುಮಾರ್ ಮಾತನಾಡಿದರು.
ಕೆಪಿಟಿಸಿಎಲ್ ನ 1899 ಹುದ್ದೆಗಳಿಗೆ 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಅಂದಿನಿಂದ ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿತ್ತು, ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ, ಅದರಂತೆ ಇಂದು 21 ಜನ ಕಿರಿಯ ಪವರ್ ಮ್ಯಾನ್ ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ, ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಬಂದ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ ಎಂದರು. ಕೆಪಿಟಿಸಿಎಲ್ ನಲ್ಲಿ ಖಾಲಿ ಇರುವ ಇತರ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಹಾಗೂ ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ಮಂಜುಳಾ ಅವರು ಉಪಸ್ಥಿತರಿದ್ದರು.
Key words: fill- 1899 posts – KPTCL-Minister – Sunil Kumar