ಮೈಸೂರು,ಅಕ್ಟೋಬರ್,14,2021(www.justkannada.in): ರಾತ್ರಿ ಎಂಟು ಗಂಟೆಗೆ ಬಂದ್ ಆಗುತ್ತಿದ್ದ ಚಾಮುಂಡೇಶ್ವರಿ ದೇವಸ್ಥಾನವನ್ನು ಇಂದು ಮತ್ತು ನಾಳೆ ರಾತ್ರಿ 10 ಗಂಟೆಯವರೆಗೆ ತೆರೆದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಅರಮನೆ ಆವರಣದಲ್ಲಿ ಇಂದು ಬೆಳಗ್ಗೆ ಮಾವುತರು ಮತ್ತು ಕಾವಾಡಿಗರಿಗೆ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಚಾಮುಂಡೇಶ್ವರಿ ದೇವಸ್ಥಾನವನ್ನು ರಾತ್ರಿ 8 ಗಂಟೆಗೆ ಬಂದ್ ಮಾಡಲಾಗುತ್ತಿತ್ತು. ನಗರದ ದೀಪಾಲಂಕಾರ ನೋಡಿಕೊಂಡು ದೇವಸ್ಥಾನಕ್ಕೆ ತೆರಳುವವರು ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲೆಂದು ಶುಕ್ರವಾರದವರೆಗೆ ರಾತ್ರಿ 10 ಗಂಟೆಯವರೆಗೆ ದರ್ಶನದ ಅವಧಿ ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಂಬೂಸವಾರಿಗೆ ಎಲ್ಲ ಸಿದ್ಧತೆ ಆಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದೆ 500 ಜನರಿಗೆ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಕೆಲವರು ಒಂದು ವಾರ, ಮತ್ತೆ ಕೆಲವರು ದೀಪಾವಳಿವರೆಗೆ ದೀಪಾಲಂಕಾರ ವಿಸ್ತರಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಎಂದು ಹೇಳಿದರು.
ಡಿಕೆ ಶಿವಕುಮಾರ್ ಪರ್ಸಂಟೆಜ್ ವಿಚಾರದ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಹೇಳಿದ್ದಾರೆ. ನಾನು ಶಾಸಕನಾಗಿದ್ದಾಗ ಇದೇನು ಇರಲಿಲ್ಲ,. ಆದರೆ ಈಗ ಅವರಿಗೆ ಗೊತ್ತಿರಬಹುದು ಅದಕ್ಕೆ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಷಡ್ಯಂತ್ರ ನಡೀತಿದೆ ಎಂದು ಹಿಂದೆಯೇ ಹೇಳಿದ್ದೆ. ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಷಡ್ಯಂತ್ರ ನಡೀತಿದೆ. ಇದು ಆ ಪಕ್ಷದ ಆಂತರಿಕ ವಿಚಾರ ಎಂದು ಉತ್ತರಿಸಿದರು.
23 ಸಚಿವರನ್ನು ಸಿದ್ದರಾಮಯ್ಯ ಬೀದಿಪಾಲು ಮಾಡಿದರು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯ ಅವರು ಪಕ್ಷ ಬಿಡುವಂತೆ ಹೇಳಿಲ್ಲ. ಇದು ಹಳೆ ವಿಷಯ, ಇದನ್ನೇ ಮತ್ತೆ ಮತ್ತೆ ಹೇಳುವುದು ಸರಿಯಲ್ಲ. ಕುಮಾರಸ್ವಾಮಿ ಅವರು ರಾತ್ರಿ 10 ಗಂಟೆಗೆ ಮಲಗಿ, ಕಣ್ಮುಚ್ಚಿಕೊಂಡು ಯೋಚಿಸಿದರೆ 23 ಜನ ಯಾಕೆ ಹೋದರು ಅಂತ ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
Key words: Minister -ST Somashekhar – instructed –DC-open -Chamundeshwari Temple- till- 10 pm- today.