ಬೆಂಗಳೂರು, ಅಕ್ಟೋಬರ್ 18, 2021 (www.justkannada.in): ಈ ಬಾರಿ 66 ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬರೋಬ್ಬರಿ 6 ಸಾವಿರ ಶಿಫಾರಸ್ಸು ಅರ್ಜಿಗಳು ಬಂದಿವೆಯಂತೆ.
ಪ್ರತಿ ವರ್ಷ ನವೆಂಬರ್ ತಿಂಗಳು ಬಂತೆಂದರೆ ಈ ‘ಪ್ರತಿಷ್ಠಿತ’ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಲಭಿಸಿ, ಎಲ್ಲೆಡೆ ಅದರದ್ದೇ ಚರ್ಚೆಗಳಾಗುತ್ತಿರುತ್ತವೆ. ಪ್ರಶಸ್ತಿಗಾಗಿ ಲಾಬಿ ಆರಂಭವಾಗಿ ಕೊನೆಯ ನಿಮಿಷದಲ್ಲಿ ಪ್ರಶಸ್ತಿ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡುವ ಪ್ರಯತ್ನಗಳಾಗುತ್ತಿರುತ್ತವೆ. ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ವಿವಾದ ಮುಕ್ತವನ್ನಾಗಿಸಲು ಪ್ರಯತ್ನಿಸುತ್ತಿದೆ. ಆದರೆ ಪ್ರಶಸ್ತಿ ವಿಜೇತರ ಆಯ್ಕೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಲೇ ಇರುತ್ತದೆ. ಈ ವರ್ಷ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲು ಅರ್ಹ ಸಾಧಕರನ್ನು ಶಿಫಾರಸ್ಸು ಮಾಡುವಂತೆ ಸಾರ್ವಜನಿಕರಿಗೇ ಅವಕಾಶವನ್ನು ನೀಡಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಕೇವಲ 66 ಪ್ರಶಸ್ತಿಗಳಿಗೆ ಇಲಾಖೆಗೆ ಬರೋಬ್ಬರಿ 6 ಸಾವಿರ ಅರ್ಜಿಗಳು ಬಂದಿವೆ. ಪ್ರತಿ ವರ್ಷ ಇದರ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷ ಸರ್ಕಾರ ಇದರ ಸಂಖ್ಯೆಯನ್ನು 66ಕ್ಕೆ ಮಿತಿಗೊಳಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ ಪ್ರಶಸ್ತಿ ಆಕಾಂಕ್ಷಿಗಳು ತಮ್ಮ ಹಿತೈಷಿಗಳ ಮೂಲಕ ಪ್ರಶಸ್ತಿಗೆ ಶಿಫಾರಸ್ಸುಗಳನ್ನು ಕಳುಹಿಸಿದ್ದಾರಂತೆ. ಇದರಿಂದಾಗಿ ಬೃಹತ್ ಸಂಖ್ಯೆಯ ಅರ್ಜಿಗಳು ಸೃಷ್ಟಿಯಾಗಿವೆ. ಸಲಹಾ ಸಮಿತಿಯು ಎಲ್ಲಾ ಅರ್ಜಿಗಳನ್ನು ಪಡೆದುಕೊಂಡಿದ್ದು, ಅಕ್ಟೋಬರ್ 24 ರೊಳಗೆ ಅಂತಿಮ ಪಟ್ಟಿ ಸಿದ್ಧವಾಗುತ್ತದೆ ಎಂದು ತಿಳಿಸಿದೆ.
ಪ್ರಶಸ್ತಿ ಕೋರುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ೨೦೧೮-೧೯ರಲ್ಲಿ ೧,೩೦೦ ಅರ್ಜಿಗಳು ಬಂದಿದ್ದವು. ೨೦೧೯-೨೦ರಲ್ಲಿ ೧,೧೯೧ ಅರ್ಜಿಗಳು ಬಂದಿದ್ದವು. ೨೦೨೦-೨೧ನೇ ಸಾಲಿಗೆ ಪ್ರಶಸ್ತಿ ಕೋರಿ ೩,೦೦೦ ಅರ್ಜಿಗಳು ಬಂದಿದ್ದವು. ಈ ವರ್ಷ ಇದರ ಸಂಖ್ಯೆ ೬,೦೦೦ಕ್ಕೆ ಏರಿಕೆಯಾಗಿದೆ.
ಪ್ರತಿ ವರ್ಷ ಪಟ್ಟಿ ಅಂತಿಮಗೊಳಿಸಿದ್ದರೂ ಸಹ ಅನೇಕರು ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ಪ್ರಶಸ್ತಿ ಪಡೆಯಲು ಇರುವ ಅರ್ಹತಾ ಮಾನದಂಡಗಳಲ್ಲಿ ಕ್ರೀಡಾ ಕ್ಷೇತ್ರದ ಸಾಧಕರನ್ನು ಹೊರತುಪಡಿಸಿದಂತೆ ಉಳಿದ ಕ್ಷೇತ್ರದವರಿಗೆ ೬೦ ವರ್ಷ ಮೇಲ್ಪಟ್ಟವರಾಗಿರಬೇಕೆಂಬ ನಿಯಮವಿದೆ. ಅಕ್ಟೋಬರ್ ೧೪, ೧೫ರಂದು ರಜೆಗಳಿರುವ ಹೊರತಾಗಿಯೂ ಇಲಾಖೆಗೆ ಅರ್ಜಿಗಳು ಬಂದಿವೆ.
ಪ್ರಶಸ್ತಿಗೆ ಶಿಫಾರಸ್ಸಿನ ಅರ್ಜಿಗಳನ್ನು ಪಡೆಯಲು ಅಕ್ಟೋಬರ್ ೧೫ ಕೊನೆಯ ದಿನ ಎಂದು ನಿಗಧಿಪಡಿಸಲಾಗಿತ್ತು. ನವೆಂಬರ್ ೧ರಂದು ೬೬ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಹಾಗಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ೬೬ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Kannada Rajyotsava- 6 thousand -applications – received – 66 awards