ಬೆಂಗಳೂರು, ಅಕ್ಟೋಬರ್ 21, 2021 (www.justkannada.in): ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮದ (ಐಆರ್‌ಎಸ್‌ಡಿಸಿ) ವಿಸರ್ಜನೆಯಿಂದಾಗಿ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣ ಪುನಃ ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ತೆಕ್ಕೆಗೆ ಮರಳಿದೆ. ಐಆರ್ ಎಸ್ ಡಿಸಿಯನ್ನು ವಿಸರ್ಜಿಸುವ ನಿರ್ಧಾರವನ್ನು ರೈಲ್ವೆ ಸಚಿವಾಲಯ ಕೈಗೊಂಡಿದ್ದು, ರೈಲ್ವೆ ಮಂಡಳಿ ಇದನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಅಧಿಸೂಚಿತಗೊಳಿಸಿದೆ.
ಐಆರ್ ಎಸ್ ಡಿಸಿ ನಿರ್ವಹಿಸುತ್ತಿರುವ ಎಲ್ಲಾ ಠಾಣೆಗಳನ್ನೂ ಸಹ ಸಂಬಂಧಪಟ್ಟ ಪ್ರಾಂತೀಯ ರೈಲ್ವೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಮಂಡಳಿಯ ಉಪ ನಿರ್ದೇಶಕರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಉಳಿದುಕೊಂಡಿರುವ ಯೋಜನೆಗಳು ಹಾಗೂ ಪೂರಕ ದಾಖಲೆಪತ್ರಗಳನ್ನು ಪ್ರಾಂತೀಯ ಪ್ರಾಧಿಕಾರಗಳಿಗೆ ವರ್ಗಾಯಿಸುವಂತೆಯೂ ಪತ್ರದಲ್ಲಿ ಸೂಚಿಸಲಾಗಿದೆ. ಈ ನಿರ್ಧಾರದಿಂದಾಗಿ ರೈಲ್ವೆ ಪ್ರಾಧಿಕಾರಗಳು ಈಗಲಾದರೂ ರೈಲು ನಿಲ್ದಾಣಗಳ ವಾಣಿಜ್ಯೀಕರಣದ ಕಡೆ ಗಮನ ನೀಡುವುದಕ್ಕಿಂತ ಹೆಚ್ಚಾಗಿ ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ವೃದ್ಧಿಸುವ ಕಡೆ ಹೆಚ್ಚಿನ ಗಮನ ನೀಡಬಹುದು ಎಂಬ ವಿಶ್ವಾಸ ಗರಿಗೆದರಿದೆ.
ಕೆ ಎಸ್ ಆರ್ ಬೆಂಗಳೂರಿನ, ನಿಲ್ದಾಣ ಕಾರ್ಯಾಚರಣೆಗಳನ್ನು ಐಆರ್ ಎಸ್ ಡಿಸಿ ನಿರ್ವಹಿಸುತಿತ್ತು ಹಾಗೂ ಅಕ್ವೇರಿಯಂನಂತಹ ಮೌಲ್ಯವರ್ಧಿತ ಸೇವೆಗಳನ್ನು ಪರಿಚಯಿಸಿತ್ತು. ಸೆಪ್ಟೆಂಬರ್ ನಲ್ಲಿ ಐಆರ್ ಎಸ್ ಡಿಸಿ, ನಿಲ್ದಾಣದ ಪ್ರವೇಶದ್ವಾರದ ಬಳಿ ಇರುವ ಸುಮಾರು ೧೫,೦೦೦ ಚದರಡಿ ಪ್ರದೇಶವ್ಯಾಪ್ತಿಯಲ್ಲಿ ೨೪x೭ ಗಂಟೆಗಳು ಕಾರ್ಯನಿರ್ವಹಿಸುವ ರೈಲ್ವೆ ಆರ್ಕೇಡೆ ಶಾಪಿಂಗ್ ಮಾಲ್ ಅನ್ನು ನಿರ್ಮಿಸಲು ಬಿಡ್ ಗಳನ್ನು ಆಹ್ವಾನಿಸಿತ್ತು. ಇದಕ್ಕೆ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈಗ ಈ ಯೋಜನೆಯನ್ನು ನೈಋತ್ಯ ರೈಲ್ವೆ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಐಆರ್ ಎಸ್ ಡಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಈ ಯೋಜನೆಯ ಭವಿಷ್ಯದ ಕುರಿತು ನಿರ್ಧರಿಸುವುದು ಈ ರೈಲ್ವೆ ಪ್ರಾಧಿಕಾರಕ್ಕೆ ಸೇರಿದೆ,” ಎಂದರು.
ನಗರ ಸಾರಿಗೆ ಕಾರ್ಯಕರ್ತ ಸಂಜೀವ್ ದ್ಯಾಮಣ್ಣವರ್ ಅವರು ಈ ಕುರಿತು ಮಾತನಾಡುತ್ತಾ, ರೈಲ್ವೆ ಇಲಾಖೆ ನಿಲ್ದಾಣಗಳ ಹೆಚ್ಚುತ್ತಿರುವ ವಾಣಿಜ್ಯೀಕರಣವನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಅದರ ಬದಲಿಗೆ ಪ್ರಯಾಣಿಕರಿಗೆ ಸೂಕ್ತ ಅಗತ್ಯ ಸೌಕರ್ಯಗಳನ್ನು ನೀಡುವ ಕಡೆ ಹೆಚ್ಚಿನ ಗಮನ ನೀಡಬೇಕು, ಎಂದು ತಿಳಿಸಿದರು.
“ನೈಋತ್ಯ ರೈಲ್ವೆ ಕೂಡಲೇ ಈ ರೈಲ್ವೆ ಆರ್ಕೆಡ್ ಯೋಜನೆಯನ್ನು ಕೈಬಿಡಬೇಕು. ರೈಲ್ವೆ ನಿಲ್ದಾಣದ ಪ್ರವೇಶದ್ವಾರದಲ್ಲಿ ಅಥವಾ ಹೊರಗೆ ಬರುವ ರಸ್ತೆಯಲ್ಲಿ ಷಾಪಿಂಗ್ ಕೇಂದ್ರವನ್ನು ನಿರ್ಮಿಸುವ ಆಲೋಚನೆಯೇ ಅವೈಜ್ಞಾನಿಕ. ಈ ರೀತಿ ಸೀಮಿತ ಸ್ಥಳಾವಕಾಶವಿರುವಂತಹ ಇತರೆ ಯಾವುದೇ ರೈಲು ನಿಲ್ದಾಣಗಳಲ್ಲಿಯೂ ಸಹ ಇಂತಹ ಯೋಜನೆಗಳ ಬಗ್ಗೆ ಆಲೋಚಿಸಿಲ್ಲ,” ಎಂದು ವಿವರಿಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: KSR-Bangalore -Railway Station- back – Southwestern Railway.