ಬೆಂಗಳೂರು,ಜು,25,2019(www.justkannada.in): ಸಚಿವ ಸ್ಥಾನ ಸಿಗದಿದ್ದರೇ ನಮ್ಮ ಸಂತೃಪ್ತ ಶಾಸಕರು ಸುಮ್ಮನೇ ಬಿಡ್ತಾರೇನ್ರಿ. ಬಿಎಸ್ ಯಡಿಯೂರಪ್ಪರನ್ನ ಹರಿದು ನುಂಗ್ತಾರೆ ನೋಡಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ ರಾಜಕೀಯದ ವಿಚಾರವಾಗಿ ಗುರುವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜತೆಗೆ ಮಾತನಾಡಿದ ಡಿಕೆ ಶಿವಕುಮಾರ್, ‘ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದರೆ ಯಡಿಯೂರಪ್ಪನವರ ಕಥೆ ಗೋವಿಂದಾ’ ಗೋವಿಂದಾ…! ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…
’30-40 ವರ್ಷಗಳ ಕಾಲ ಸಾಕಿ ಸಲಹಿಸಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ ನಮ್ಮನ್ನು ಕಾರ್ಯಕರ್ತರನ್ನೇ ಸಂತೃಪ್ತರು ಬಿಡಲಿಲ್ಲ. ಇನ್ನು ಬಿಜೆಪಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ಬಿಡ್ತಾರಾ? ಯಡಿಯೂರಪ್ಪನವರನ್ನು ಹರಿದು ನುಂಗ್ತಾರೆ. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕಾರ ಮಾಡಬೇಕಾದರೆ ಒಟ್ಟಾಗಿ ಸ್ವೀಕರಿಸಿದ್ರೆ ಬದುಕಿದ್ರಿ ಇಲ್ಲದಿದ್ದರೇ ಬಿಎಸ್ ವೈ ಕಥೆ ಗೋವಿಂದಾ ಗೋವಿಂದಾ..
ಅಷ್ಟೂ 15 ಮಂದಿ ಶಾಸಕರಲ್ಲಿ ಕುಮಟಳ್ಳಿ ಒಬ್ಬ ಮಾತ್ರ ಸಚಿವ ಸ್ಥಾನ ಬಿಡಬಹುದು. ಮಿಕ್ಕ ಎಲ್ಲರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿತಾರೆ. ಒಂದು ವೇಳೆ ಅವರಿಗೆ ಸಿಗದಿದ್ದರೆ ಯಡಿಯೂರಪ್ಪನವರ ಪ್ಯಾಂಟು, ಶರ್ಟು ಹರಿದುಹಾಕ್ತಾರೆ. ಒಬ್ಬ ಜೇಬು ಕಿತ್ತುಕೊಂಡರೆ, ಮತ್ತೊಬ್ಬ ಪ್ಯಾಂಟು, ಇನ್ನೊಬ್ಬ ಶರ್ಟು ಕಿತ್ತುಕೊಳ್ತಾರೆ. ಅಷ್ಟೇಅಲ್ಲ ಯಡಿಯೂರಪ್ಪನವರ ಸುತ್ತಮುತ್ತ ಇರುವ ಮುತ್ತು ರತ್ನಗಳನ್ನೆಲ್ಲಾ ಕಿತ್ತು ಹಾಕ್ತಾರೆ.’
‘ಯಡಿಯೂರಪ್ಪನವರಿಗೆ ಇನ್ನು ಅವರಿಗೆ ಗೊತ್ತಿಲ್ಲ. ಅಲ್ಲಿರುವವರ ಪೈಕಿ ಒಬ್ಬನಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವಸ್ಥಾನ ಬೇಕು, ಒಬ್ಬನಿಗೆ ಪವರ್ ಬೇಕು, ಒಬ್ಬನಿಗೆ ಡಿಡಬ್ಲ್ಯೂಡಿ, ಇನ್ನೊಬ್ಬನಿಗೆ ಜಲಸಂಪನ್ಮೂಲ ಬೇಕು ಎಂದು ಈಗಾಗಲೇ ಸಚಿವ ಸ್ಥಾನ ಹಂಚಿಕೊಂಡು ಕೂತಿದ್ದಾರೆ. ನನ್ನ ಹತ್ತಿರ ಅವರು ಮಾತನಾಡಿದ್ದು, ನನ್ನ ಬಳಿ ಯಾರಿಗೆ ಯಾವ ಖಾತೆ ಬೇಕು ಎಂಬ ಪಟ್ಟಿ ಇದೆ. ನಾನು ಅದನ್ನು ಮುಂದಿನ ಅಧಿವೇಶನದಲ್ಲಿ ಹೇಳ್ತೀನಿ.’
‘ಅವರನ್ನು ಬಿಜೆಪಿ ಹೈಕಮಾಂಡ್ ಕಂಟ್ರೋಲ್ ಮಾಡುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ನಮ್ಮ ಸ್ನೇಹಿತರ ಪರಿಸ್ಥಿತಿ ಏನಾಗುತ್ತೆ ಅಂತಾ ಗೊತ್ತು. ಅಷ್ಟು ಮಾತ್ರ ಹೇಳ್ತೀನಿ. ಯಡಿಯೂರಪ್ಪನವರು ತಮ್ಮ ಜತೆ ಇವರನ್ನು ಪ್ರಮಾಣವಚನ ಮಾಡಿಕೊಂಡರೆ ಅವರು ಬಚಾವಾಗ್ತಾರೆ. ಇಲ್ಲಂದ್ರೆ ಯಡಿಯೂರಪ್ಪ ಗೋವಿಂದಾ.. ಗೋವಿಂದ.’
ರಾಜೀನಾಮೆ ಅಂಗೀಕಾರ ಸ್ಪೀಕರ್ ಅವರ ಪರಮಾಧಿಕಾರಕ್ಕೆ ಬಿಟ್ಟದ್ದು:
‘ಬಿಜೆಪಿ ಹೈಕಮಾಂಡ್ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡುತ್ತೋ ಬಿಡುತ್ತೋ ಗೊತ್ತಿಲ್ಲ. ಇದರಿಂದ ನನಗೆ ಪ್ಲಸ್ ಬೇಡ ಮೈನಸ್ಸೂ ಬೇಡ. ಯಾವುದೇ ಸರ್ಕಾರ ರಚನೆಯಾಗಬೇಕಾದರೆ 224 ಶಾಸಕರ ಪೈಕಿ 113 ಬಹುಮತ ಇರಬೇಕು. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸ್ತಾರಾ ಬಿಡ್ತಾರ ಅದು ನನಗೆ ಗೊತ್ತಿಲ್ಲ. ಅದು ಅವರ ಪರಮಾಧಿಕಾರ. ಸುಪ್ರೀಂ ಕೋರ್ಟೇ ಅವರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೀಗಿರುವಾಗ ಅದರ ಬಗ್ಗೆ ಮಾತನಾಡಲು ನಾನ್ಯಾರು? ನಾನು ಕಲಿತ ವಿದ್ಯೆ, ಓದಿದ ಪುಸ್ತಕದ ಆಧಾರದ ಮೇಲೆ ನಾನು ಹೇಳಿದ್ದೇನೆ.’
ಯಾವ ಶಾಸಕರು ಏನು ಹೇಳಿದ್ದಾರೆ, ಶಿವರಾಂ ಹೆಬ್ಬಾರ್ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇಲ್ಲಿ ಅತೃಪ್ತರು ಯಾರೂ ಇಲ್ಲ ಎಲ್ಲರು ಸಂತೃಪ್ತರು. ನಾನು ಏನು ಹೇಳಬೇಕೋ ಎಲ್ಲವನ್ನೂ ಸದನದಲ್ಲಿ ಹೇಳಿದ್ದಾನೆ. ಈಗ ನಾನೇನು ಮಾತನಾಡಲು ಹೋಗಲ್ಲ. ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇದ್ದಾರೆ. ಹೀಗಾಗಿ ನಾನು ಈ ಬಗ್ಗೆ ಕಾಮೆಂಟ್ ಮಾಡುವುದಿಲ್ಲ.’
ಯಾವುದೇ ಸ್ಥಾನಮಾನ ಬೇಡ!
ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಬೇಡ. ನನಗೆ ಅದರ ಅವಶ್ಯಕತೆನೂ ಇಲ್ಲ. ಈಗಿರುವ ಸ್ಥಾನಮಾನವನ್ನು ನನ್ನ ಕ್ಷೇತ್ರದ ಜನತೆ ಕೊಟ್ಟಿದ್ದಾರೆ. ನನಗೆ ಅಷ್ಟೇ ಸಾಕು. ನಮ್ಮ ಪಕ್ಷ ಮಂತ್ರಿ ಸ್ಥಾನ ನೀಡಿತ್ತು. ಅದು ಈಗ ಇಲ್ಲ. ನಾನು ಸಮಾಧಾನವಾಗಿಯೇ ಇದ್ದೀನಿ. ಇಲ್ಲಿ ನೋಡಿ ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಹೇಗೆ ಜನ ಬಂದು ನಿಂತಿದ್ದಾರೆ. ನಮಗೆ ಇದೇ ಸಾಕು. ಇನ್ನು ಸ್ಪೀಕರ್, ಕೋರ್ಟ್ ವಿಚಾರವಾಗಿ ಹೊರತಾಗಿ ನೀವು ಬೇರೆ ಯಾವುದೇ ವಿಚಾರವಾಗಿ ಪ್ರಶ್ನೆ ಕೇಳಿ. ಸಂವಿಧಾನಿಕ ಸಂಸ್ಥೆಗಳ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ.’
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:
ಮೈತ್ರಿ ಮಾಡಿದ್ದು ರಾಹುಲ್ ಗಾಂಧಿ ಅವರು. ನಮ್ಮ ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಹಾಗೆ ನಾನು ಕೆಲಸ ಮಾಡುತ್ತೇನೆ. ಮೈತ್ರಿ ಮಾಡಿಕೊಂಡು 14 ತಿಂಗಳು ನಾವು ಜೆಡಿಎಸ್ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇಷ್ಟು ದಿನಗಳ ಕಾಲ ಜತೆಗೆ ಹೋರಾಟ ಮಾಡಿ ಇವತ್ತು ಸರ್ಕಾರ ಬಿತ್ತು ಎಂಬ ಕಾರಣಕ್ಕೆ ಅವರೊಂದಿಗೆ ರಂಪ ಮಾಡಿಕೊಳ್ಳಲು ನಾನು ಸಿದ್ಧವಿಲ್ಲ. ಹಾಗೇನಾದ್ರ ನಾವು ಮಾಡಿದರೆ ಜನ ನಮಗೆ ಉಗಿತಾರೆ. ದೇವೇಗೌಡರು ಹಾಗೂ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಏನಾದ್ರೂ ತೀರ್ಮಾನ ಮಾಡಲಿ. ಅವರು ಏನು ಹೇಳ್ತಾರೋ ಅದನ್ನು ನಾವು ಕೇಳ್ತೀವಿ. ಬೇರೆಯವರು ಏನು ಹೇಳ್ತಾರೋ ಗೊತ್ತಿಲ್ಲ. ಡಿಕೆ ಶಿವಕುಮಾರ್ ಆಗಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಡಿಕೆಶಿ ಹೇಳಿದರು.
Key words: Bangalore- bs Yeddyurappa –rebel mlas- DK Shivakumar