ಮೈಸೂರು, ನ.05,2021 : (www.justkannada.in) ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಜನಮನ್ನಣೆ ಪಡೆದಿರುವ ಬಿಳಿಗಿರಿರಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಕೆಲ ಸಿಬ್ಬಂದಿಗಳು ಪ್ರವಾಸಿಗರಿಂದ ಅನಧಿಕೃತ ಹಣ ವಸೂಲಿಗೆ ಮುಂದಾಗಿದ್ದಾರೆ.
ಜಿಲ್ಲೆಯ ಯಳಂದೂರು ಸಮೀಪದ ಬಿ.ಆರ್.ಹಿಲ್ಸ್ ನ ಪ್ರವೇಶಕ್ಕೂ ಮುನ್ನ, ಚೆಕ್ ಪೋಸ್ಟ್ ನಲ್ಲೇ ಈ ರೀತಿ ಅನಧಿಕೃತ ಹಣ ವಸೂಲಿ ನಡೆಯುತ್ತಿರುವುದು. ಪ್ರವಾಸಿಗರಿಂದ ಮಾಹಿತಿ ಪಡೆಯುವ ವೇಳೆ ಈ ಹಣ ವಸೂಲಿ ದಂಧೆ ನಡೆಯುತ್ತಿದೆ.
ಪರ ಸ್ಥಳಗಳಿಂದ ಆಗಮಿಸುವ ವಾಹನಗಳನ್ನು ಮಾಹಿತಿ ಪಡೆಯುವ ಸಲುವಾಗಿ ಚೆಕ್ ಪೋಸ್ಟ್ ಪ್ರವೇಶ ದ್ವಾರದ ಬಳಿ ನಿಲ್ಲಿಸಲಾಗುತ್ತದೆ. ಬಳಿಕ ವಾಹನದ ವಿವರ ಹಾಗೂ ವಾಹನದಲ್ಲಿರುವವರ ಬಗ್ಗೆ ಮಾಹಿತಿ ಪಡೆದು, ಅರಣ್ಯ ವಲಯದಲ್ಲಿ ಡ್ರೈವ್ ಮಾಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿಯೇ ಈ ಮಾಹಿತಿ ಪಡೆದು, ಮೊಬೈಲ್ ಆಪ್ ಮೂಲಕ ಅವನ್ನು ದಾಖಲಿಸಿ ಬಳಿಕ ಪ್ರಿಂಟ್ ಔಟ್ ಒಂದನ್ನು ನೀಡುತ್ತಾರೆ.
ಆದರೆ, ಈ ಪ್ರಿಂಟ್ ಔಟ್ ಚೀಟಿಯನ್ನು ನೀಡುವ ಜವಾಬ್ದಾರಿಯನ್ನು ಬೇರೊಬ್ಬ ಸಿಬ್ಬಂದಿಗೆ ವಹಿಸಲಾಗಿದ್ದು, ಆತ ವಾಹನ ಸವಾರರಿಂದ ಹಣ ಪಡೆದು ಚೀಟಿ ನೀಡುತ್ತಾರೆ. ಈ ಹಣ, ವಾಹನ ನೊಂದಣಿ ಆಧಾರಿಸಿದ್ದು (ರಾಜ್ಯ ಹಾಗೂ ಹೊರರಾಜ್ಯ..), 20 ರಿಂದ 50 ರೂ.ಗಳ ತನಕ ವಸೂಲಿ ಮಾಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಚೀಟಿಯಲ್ಲಿ ವಾಹನ ಪ್ರವೇಶದ್ವಾರಕ್ಕೆ ಎಂಟ್ರಿಯಾದ ಸಮಯವನ್ನು ದಾಖಲಿಸಿ, ವಾಹನ 40 ಕಿಮೀ ವೇಗದಲ್ಲಿ ಚಲಿಸುವುದು, ನಿಮಯ ಉಲ್ಲಂಘಿಸಿದಲ್ಲಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ಜತೆಗೆ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಪ್ರಮುಖವಾಗಿ ಈ ಚೀಟಿಯಲ್ಲಿ ಯಾವುದೇ ಶುಲ್ಕದ ವಿವರಗಳು ಇರುವುದಿಲ್ಲ.
ಇದರಿಂದಲೇ ಸಾಬೀತಾಗುತ್ತದೆ, ಪ್ರವೇಶದ್ವಾರದಲ್ಲಿನ ಸಿಬ್ಬಂದಿ ಪ್ರವಾಸಿಗರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು.
ಸ್ಪಷ್ಟನೆ:
ಬಿ.ಆರ್.ಹಿಲ್ಸ್ ಗೆ ತೆರಳುವ ಪ್ರವಾಸಿಗರಿಂದ ಯಾವುದೇ ರೀತಿಯ ಶುಲ್ಕ ಸಂಗ್ರಹಕ್ಕೆ ಸರಕಾರ ಅನುಮತ ನೀಡಿಲ್ಲ ಎಂದು ಡಿಸಿಎಫ್ ಡಾ.ಸಂತೋಷ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಅವರು ಹೇಳಿದಿಷ್ಟು..
ಬಿ.ಆರ್ . ಹಿಲ್ಸ್ ಗೆ ತೆರಳುವವರಿಂದ ಯಾವುದೇ ಶುಲ್ಕ ಸಂಗ್ರಹಿಸುತ್ತಿಲ್ಲ. ಯಾರೂ ಕೊಡಬಾರದು. ಹೋಗಿ ಬರುವವರಿಗೆ ಸಮಯದ ಮಿತಿ ಇರಲಿ ಎನ್ನುವ ಕಾರಣಕ್ಕೆ ಅವರಿಂದ ಮಾಹಿತಿ ಪಡೆದು ಚೀಟಿ ನೀಡುತ್ತಿದ್ದೇವೆ ಹೊರತು ಶುಲ್ಕ ಸಂಗ್ರಹಿಸಲು ಅಲ್ಲ. ಆದ್ದರಿದ ಹೀಗೆ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಸಂತೋಷ್ ಕುಮಾರ್ ಸ್ಪಷ್ಟನೆ ನೀಡಿದರು.
KEY words : B.R.Hills-forest-department-illegal-fee-collecting-chamarajanagara-DCF-clariffies-action-against-employe