ಬೆಂಗಳೂರು,ನವೆಂಬರ್,8,2021(www.justkannada.in): ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ 11 ಕೆರೆಗಳನ್ನು ತುಂಬಿಸುವ ಕಾಮಗಾರಿಯ (ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ ಹಂತ, 2) ರೂ.22.50 ಕೋಟಿ ಮೊತ್ತದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಭಾಗಶಃ ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿದ್ದು, ಯಾವುದೇ ನೀರಾವರಿ ಸೌಲಭ್ಯವಿಲ್ಲದೇ ಬರಡು ಪ್ರದೇಶವಾಗಿರುತ್ತದೆ. ಈ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಮಳೆಯ ನೀರಿಗೆ ಅವಲಂಬಿತರಾಗಿದ್ದಾರೆ. ಅಕ್ಕಿಹೆಬ್ಬಾಳು ಹೋಬಳಿಯ ಸುಮಾರು 11 ಕೆರೆಗಳು ಸಕಾಲದಲ್ಲಿ ಮಳೆಯಾದರೆ ಮಾತ್ರ ತುಂಬುತ್ತವೆ. ಈ ನಿಟ್ಟಿನಲ್ಲಿ ಸದರಿ ಕೆರೆಗಳು ತುಂಬಿ ಬಹಳ ವರ್ಷಗಳೇ ಕಳೆದಿವೆ. ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟವು ಸುಮಾರು 600 ರಿಂದ 700 ಅಡಿಗಳವರೆಗೆ ಕುಸಿದಿರುತ್ತದೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ 11 ಕೆರೆಗಳಿಗೆ ನೀರು ತುಂಬಿಸುವುದರಿಂದ ಈ ಕೆರೆಗಳ ಸುತ್ತಮುತ್ತಲಿನ ಗ್ರಾಮದ ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಈ ಭಾಗದ ಅಂತರ್ಜಲ ಮಟ್ಟ ಏರಿಕೆಯಾಗುವುದರಿಂದ 22.50 ಕೋಟಿ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಆಲೂರು ಪಿಟ್ಲಹಳ್ಳಿ ಬ್ರಿಡ್ಜ್ ಕಮ್ ಬ್ಯಾರೇಜ್ ಗೆ ಅನುಮೋದನೆ..
ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ-ಆಲೂರು ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯ ರೂ.15.66 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಲೂರು-ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ರೂ.15.66 ಕೋಟಿ ಕಾಮಗಾರಿಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಆಲೂರು ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್ ನ ನಿರ್ಮಾಣದಿಂದಾಗಿ ಸದರಿ ಪ್ರದೇಶದ ಅಂತರ್ಜಲ ಮರು ಪೂರ್ಣಗೊಳಿಸಲು, ಬ್ಯಾರೇಜ್ನ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಮತ್ತು ಆಲೂರು, ಪಿಟ್ಲಳ್ಳಿ ನಂದಿಹಳ್ಳಿ ಆದಿವಾಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
Key words: Ranganahalli -Drinking Water- Project -approved – State Cabinet