ಚೆನ್ನೈ,ನವೆಂಬರ್,12,2021(www.justkannada.in) ಬಂಗಾಳ ಕೊಲ್ಲಿ ಮೇಲೆ ಉಂಟಾದ ವಾಯುಭಾರ ಕುಸಿತದಿಂದ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರಿಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಒಂದೇ ಸಮ ಮಳೆ ಸುರಿಯಲಾರಂಭಿಸಿ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಚೆನೈ ರಸ್ತೆಗಳಲ್ಲಿ ಮೊಣಕಾಲು ಮಟ್ಟದವರೆಗೆ ನೀರು ಹರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ನಗರದ ಟ್ರಾಫಿಕ್ ಪೊಲೀಸ್ 7 ರಸ್ತೆ ಮತ್ತು 12 ಸಬ್ ವೇಗಳನ್ನು ಮುಚ್ಚಿಸಿದ್ದರು. ಹಳಿಗಳ ಮೇಲೂ ನೀರು ಹರಿಯುತ್ತಿದ್ದರಿಂದ ಕೆಲವು ಟ್ರೈನ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಸುರಿದ ಕುಂಭದ್ರೋಣ ಮಳೆಗೆ ಚೆನ್ನೈ ನಡುಗಡ್ಡೆಯಂತಾಗಿದ್ದು ಮಳೆಯಿಂದಾಗಿ ತಮಿಳುನಾಡಿನಲ್ಲಿ 500ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿವೆ. ಮೆಟ್ರೋ, ವಿಮಾನ ನಿಲ್ದಾಣಗಳು ಕೆರೆಯಂತಾಗಿದ್ದು ತಮಿಳುನಾಡನ್ನ ಮಳೆರಾಯ ಇನ್ನಿಲ್ಲದಂತೆ ಕಾಡಿದ್ದಾನೆ.
ತಮಿಳುನಾಡು ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಭಾರಿ ಮಳೆಯಿಂದಾಗಿ ಕನಿಷ್ಠ 14 ಜನ ಸತ್ತಿದ್ದಾರೆ. ಇನ್ನು ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲೂ ವರುಣ ಅಬ್ಬರಿಸಿದ್ದಾನೆ. ಚಿತ್ತೂರು, ನೆಲ್ಲೂರು, ಪ್ರಕಾಶಂ, ಕಡಪ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದು ಕಡಪ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಹೆಚ್ಚಿನ ಮಳೆ ಪ್ರದೇಶದಲ್ಲಿ ಎನ್ ಡಿಆರ್ ಎಫ್ ಮತ್ತು ಎಸ್ಡಿಆರ್ ಎಫ್ ಬೀಡುಬಿಟ್ಟಿವೆ. ಜಿಲ್ಲಾಧಿಕಾರಿಗಳಿಂದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಆಂಧ್ರ ಸಿಎಂ ಜಗನ್ , ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.
Key words: Rain –Andhra-Tamil Nadu-Peoples- life