ನವ ದೆಹಲಿ, ನವೆಂಬರ್ ೧೮, ೨೦೨೧ (www.justkannada.in): ವಿಜಯ್ ಶೇಖರ್ ಶರ್ಮಾ ತಮ್ಮ ೨೭ನೇ ವಯಸ್ಸಿನಲ್ಲಿ ಮಾಸಿಕ ಕೇವಲ ರೂ.೧೦,೦೦೦ ವೇತನವನ್ನು ಪಡೆಯುತ್ತಿದ್ದು, ಅವರಿಗೆ ಬರುತ್ತಿದ್ದಂತಹ ವೇತನ ಮದುವೆಯಾಗುವ ಅವರ ಕುಟುಂಬಸ್ಥರ ಆಸೆಗೆ ತಣ್ಣೀರೆರಚಿತ್ತು.
“೨೦೦೪-೦೫ರಲ್ಲಿ ನನ್ನ ತಂದೆ ನನಗೆ ನಾನು ನಡೆಸುತ್ತಿದ್ದಂತಹ ಕಂಪನಿಯನ್ನು ಮುಚ್ಚಿ, ರೂ.೩೦,೦೦೦ ವೇತನ ಬರುವಂತಹ ಯಾವುದಾದರೂ ಒಂದು ಉದ್ಯೋಗ ಹುಡುಕಿ ಸೇರಿಕೋ ಎಂದರು,” ಎನ್ನುತ್ತಾರೆ ಶರ್ಮಾ. ಆದರೆ ೨೦೧೦ರಲ್ಲಿ ಪೇಟಿಎಂ ಎಂಬ ಹೆಸರಿನ ಡಿಜಿಟಲ್ ಪಾವತಿ ವಿಧಾನವನ್ನು ಸ್ಥಾಪಿಸಿ ಅಪಾರ ಯಶಸ್ಸನ್ನು ಸಾಧಿಸಿದರು.
ಆ ಸಮಯದಲ್ಲಿ ತರಬೇತಿ ಹೊಂದಿದ್ದಂತಹ ಈ ಇಂಜಿನಿಯರ್ ಒಂದು ಸಣ್ಣ ಕಂಪನಿಯ ಮೂಲಕ ಮೊಬೈಲ್ ಕಂಟೆಂಟ್ ಮಾರಾಟದಲ್ಲಿ ತೊಡಗಿದ್ದರು. ಶರ್ಮಾ ಅವರಿಗೆ ಮದುವೆ ಮಾಡಲು ಬಯಸಿದ್ದ ಕುಟುಂಬಸ್ಥರು ಆ ಪ್ರಯತ್ನದಲ್ಲಿದ್ದರು. ಆದರೆ ಇವರಿಗೆ ಕೇವಲ ಮಾಸಿಕ, ರೂ.೧೦,೦೦೦ ಸಂಪಾದನೆ ಇರುವುದನ್ನು ತಿಳಿದ ನಂತರ ಒಬ್ಬರೂ ಇವರನ್ನು ತಿರುಗಿ ನೋಡುತ್ತಲೇ ಇರಲಿಲ್ಲವಂತೆ. “ನಾನು ನನ್ನ ಕುಟುಂಬದ ಅನರ್ಹ ಬ್ಯಾಚುಲರ್ ಆಗಿದ್ದೆ,” ಎನ್ನುತ್ತಾರೆ ಶರ್ಮಾ.
ಕಳೆದ ವಾರ ೪೩ ವರ್ಷ ವಯಸ್ಸಿನ ಶರ್ಮಾ ೨.೫ ಬಿಲಿಯನ್ ಡಾಲರ್‌ಗಳ (ರೂ.೧೮,೬೦೦ ಕೋಟಿ) ಮೌಲ್ಯವುಳ್ಳ ಪೇಟಿಎಂ ಸಂಸ್ಥೆಯ ಆರಂಭಿಕ ಸಾರ್ವಜನಿಕ ಶೇರುಗಳನ್ನು (IPO) ಬಿಡುಗಡೆ ಮಾಡಿದರು. ಈ ಫಿನ್‌ಟೆಕ್ ಕಂಪನಿಯು ಹೊಸ ಭಾರತದ ಹೊಸ ಕುರುಹಾಗಿದ್ದು, ದೇಶದ ಮೊದಲ ತಲೆಮಾರಿನ ನವೋದ್ಯಮಗಳು (startups) ಸ್ಟಾಕ್ ಮಾರುಕಟ್ಟೆಯಲ್ಲಿ ಆರ್ಭಟಿಸುತ್ತಿದ್ದು, ಕೋಟ್ಯಂತರ ರೂ. ಗಳಿಸಲಾರಂಭಿಸಿವೆ.
ಶರ್ಮಾ ಅವರ ತಂದೆ ಓರ್ವ ಸಾಧಾರಣ ಶಾಲಾ ಶಿಕ್ಷಕ ಹಾಗೂ ಅವರ ತಾಯಿ ಗೃಹಿಣಿ. ಇವರ ಕುಟುಂಬ ದೇಶದ ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಒಂದು ಸಣ್ಣ ನಗರದಲ್ಲಿ ನೆಲೆಸಿದೆ. ಶರ್ಮಾ ಅವರು ೨೦೧೭ರಲ್ಲಿ ದೇಶದ ಅತೀ ಚಿಕ್ಕ ವಯಸ್ಸಿನ ಬಿಲಿಯನೇರ್ ಆಗಿ ಹೊರಹೊಮ್ಮಿದರು. ಇಷ್ಟು ದೊಡ್ಡ ಉದ್ಯಮಿಯಾಗಿ ಬೆಳೆದರೂ ಸಹ ಶರ್ಮಾ ಅವರು ಈಗಲೂ ರಸ್ತೆಯ ಬದಿ ತಳ್ಳುಗಾಡಿಯಲ್ಲಿ ಚಹಾ ಸೇವಿಸುತ್ತಾರೆ ಹಾಗೂ ಮುಂಜಾನೆಯಲ್ಲಿ ಮನೆಗೆ ಹಾಲು, ಬ್ರೆಡ್ ತರಲು ನಡೆದುಕೊಂಡು ಹೋಗುತ್ತಾರೆ.
“ಬಹಳ ಸಮಯದವರೆಗೆ ನಾನು ಏನು ಮಾಡುತ್ತಿದ್ದೇನೆ ಎಂದು ನನ್ನ ಪೋಷಕರಿಗೆ ಗೊತ್ತೇ ಆಗಲಿಲ್ಲ. ೨೦೧೫ರಲ್ಲಿ ಮೊಟ್ಟ ಮೊದಲ ಬಾರಿಗೆ ಚೀನಾದ ಆ್ಯಂಟ್ ಗ್ರೂಪ್ ಪೇಟಿಂಎನಲ್ಲಿ ಹೂಡಿಕೆ ಮಾಡಿತು. ಒಮ್ಮೆ ನನ್ನ ತಾಯಿ ಒಂದು ಹಿಂದಿ ದಿನಪತ್ರಿಕೆಯಲ್ಲಿ ನನ್ನ ಒಟ್ಟು ಮೌಲ್ಯದ ವಿವರಗಳನ್ನು ನೋಡಿ, ವಿಜಯ್ ನಿಜವಾಗಿಯೂ ನಿನ್ನ ಮೌಲ್ಯ ಪತ್ರಿಕೆಯವರು ಹೇಳುತ್ತಿರುವಷ್ಟು ಇದೆಯೇ? ಎಂದು ಕುತೂಹಲದಿಂದ ಕೇಳಿದ್ದರು,” ಎನ್ನುತ್ತಾರೆ ಶರ್ಮಾ. ಫೋರ್ಬ್ಸ್ ಪ್ರಕಾರ ಪ್ರಸ್ತುತ ಶರ್ಮಾ ಅವರ ಒಟ್ಟು ಮೌಲ್ಯ ೨.೪ ಬಿಲಿಯನ್ ಡಾಲರ್ (ಅಂದರೆ ಸುಮಾರು ರೂ.೧೭,೩೦೦ ಕೋಟಿ).
“ನನ್ನ ತೊಡಕುಗಳೇನು?”
ಪೇಟಿಎಂ ಕೇವಲ ಒಂದು ದಶಕದ ಹಿಂದೆ ಒಂದು ಮೊಬೈಲ್ ರೀಚಾರ್ಜ್ ಕಂಪನಿಯಾಗಿ ಆರಂಭಗೊಂಡು, ಉಬೇರ್ ಸಂಸ್ಥೆ ಪೇಟಿಎಂ ಅನ್ನು ಶೀಘ್ರ ಪಾವತಿಗಳ ಆಯ್ಕೆಯಲ್ಲಿ ಅತ್ಯಂತ ಅಪೇಕ್ಷಿತ ವ್ಯವಸ್ಥೆ ಎಂದು ಗುರುತಿಸಿದ ನಂತರ ಬಹಳ ವೇಗವಾಗಿ ಬೆಳೆಯಿತು. ೨೦೧೬ರಲ್ಲಿ ಕೇಂದ್ರ ಸರ್ಕಾರ ಅತೀ ಹೆಚ್ಚಿನ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ನಂತರದಲ್ಲಿ ಪೇಟಿಎಂನ ಬಳಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಯಿತು.
ಬೆಂಬಲ ಸಂಸ್ಥೆಗಳಾಗಿ ಸಾಫ್ಟ್ಬ್ಯಾಂಕ್ ಹಾಗೂ ಬರ್ಕ್ಶೈರ್ ಹಾಥ್‌ವೇ ಸಂಸ್ಥೆಗಳನ್ನು ಹೊಂದಿರುವ ಪೇಟಿಎಂ, ಕ್ರಮೇಣ ವಿಮೆ ಹಾಗೂ ಚಿನ್ನದ ಮಾರಾಟ, ಚಲನಚಿತ್ರ ಹಾಗೂ ವಿಮಾನ ಪ್ರಯಾಣದ ಟಿಕೆಟ್‌ಗಳ ಬುಕ್ಕಿಂಗ್ ಮತ್ತು ಬ್ಯಾಂಕ್ ಠೇವಣಿಗಳು ಹಾಗೂ ಪಾವತಿಗಳಂತಹ ಇತರೆ ಸೇವೆಗಳನ್ನು ಸಹ ತನ್ನ ವೇದಿಕೆಯಲ್ಲಿ ಸೇರ್ಪಡಿಸಿಕೊಂಡಿತು.
ಪೇಟಿಎಂ ಭಾರತದಲ್ಲಿ ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆಯೇ, ಗೂಗಲ್, ಅಮೇಜಾನ್, ವಾಟ್ಸ್ಆಪ್ ಹಾಗೂ ವಾಲ್‌ಮಾರ್ಟ್ನ ಫೋನ್‌ಪೇಗಳು ತನ್ನ ಸೇವೆಗಳನ್ನು ಆರಂಭಿಸಿದವು. ಆ ಮೂಲಕ ಡಿಜಿಟಲ್ ಪಾವತಿಗಳ ಮಾರುಕಟ್ಟೆ ೨೦೨೫ರ ಮಾರ್ಚ್ ವೇಳೆಗೆ ೯೫.೨ ಟ್ರಿಲಿಯನ್ ತಲುಪುವ ನಿರೀಕ್ಷೆಯನ್ನು ಹೊರಡಿಸಿದೆ.
ಜಾಗತಿಕ ಮಟ್ಟದ ಬೃಹತ್ ಸಂಸ್ಥೆಗಳು ಕ್ಷೇತ್ರಕ್ಕೆ ಲಗ್ಗೆಯಿಟ್ಟ ನಂತರ ಶರ್ಮಾ ಅವರಿಗೆ ಒಂದು ಕ್ಷಣ ಅನುಮಾನ ಉದ್ಭವಿಸಿ, ಸಾಫ್ಟ್ಬ್ಯಾಂಕ್‌ನ ಸ್ಥಾಪಕ, ಬಿಲಿಯನೇರ್ ಮಸಯೋಷಿ ಸಾನ್ ಅವರಲ್ಲಿ ತಮ್ಮ ಅನುಮಾನವನ್ನು ಹಂಚಿಕೊಂಡರು.
“ನಾನು ಮಾಸಾ ಅವರಿಗೆ ಕರೆ ಮಾಡಿ – ಈಗ ಎಷ್ಟೊಂದು ಸಂಸ್ಥೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನನ್ನ ಭವಿಷ್ಯವೇನು ಎಂದು ನಿಮಗನಿಸುತ್ತದೆ,” ಎಂದು ಪ್ರಶ್ನಿಸಿದೆ. ಅದಕ್ಕೆ ‘Yahoo! ‘ ಹಾಗೂ ‘Alibaba’ ದಂತಹ ಸಂಸ್ಥೆಗಳಲ್ಲಿ ಆರಂಭಿಕ ಹೂಡಿಕೆದಾರರೂ ಆಗಿರುವಂತಹ ಸಾನ್ ಅವರು, “ಇನ್ನೂ ಹೆಚ್ಚು ಹಣವನ್ನು ಕ್ರೋಢೀಕರಿಸು, ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡು, ಹಾಗೂ ಪೇಟಿಎಂಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸು,” ಎಂದು ಸಲಹೆ ನೀಡಿದರಂತೆ.
ಪ್ರಸ್ತುತ ಶರ್ಮಾ ಅವರು ವಿವಾಹಿತರಾಗಿದ್ದು ಒಬ್ಬ ಮಗನಿದ್ದಾನೆ. “ಆಗಿನಿಂದ ನಾನು ಎಂದಿಗೂ ಹಿಂದಿರುಗಿ ನೋಡಲೇ ಇಲ್ಲ,” ಎನ್ನುತ್ತಾರೆ. ಕೆಲವು ಮಾರುಕಟ್ಟೆ ವಿಶ್ಲೇಷಕರು ಪೇಟಿಎಂ ಲಾಭದಾಯಕವಾಗುವ ಕುರಿತು ಕಾಳಜಿಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಶರ್ಮಾ ಅವರು ತಮ್ಮ ಕಂಪನಿಯ ಯಶಸ್ಸಿನ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದಾರೆ. ೨೦೧೭ರಲ್ಲಿ ಪೇಟಿಎಂ ಕೆನಡಾದಲ್ಲಿ ಒಂದು ಬಿಲ್ ಪಾವತಿಗಳ ಆ್ಯಪ್ ಅನ್ನು ಬಿಡುಗಡೆ ಮಾಡಿತು ಹಾಗೂ ಒಂದು ವರ್ಷದ ನಂತರ ಜಪಾನ್‌ನಲ್ಲಿ ಒಂದು ಮೊಬೈಲ್ ವ್ಯಾಲೆಟ್ ಅನ್ನು ಬಿಡುಗಡೆಗೊಳಿಸಿತು.
“ಪೇಟಿಎಂನ ಬಾವುಟವನ್ನು ಸ್ಯಾನ್ ಫ್ರಾನ್ಸಿಸ್ಕೊ, ನ್ಯೂ ಯಾರ್ಕ್, ಲಂಡನ್, ಹಾಂಗ್ ಕಾಂಗ್ ಮತ್ತು ಟೋಕ್ಯೋಗಳಲ್ಲಿ ಹಾರಿಸುವುದು ನನ್ನ ಕನಸು. ಜನರು ಇದನ್ನು ನೋಡಿ, ‘ಹೋಯ್ ನೋಡಿ ಇದೊಂದು ಭಾರತೀಯ ಕಂಪನಿ, ಎಂದು ಉದ್ಘರಿಸುವುದನ್ನು ನೋಡಲು ನನಗೆ ಬಹಳ ಇಷ್ಟ,” ಎನ್ನುತ್ತಾರೆ ಶರ್ಮಾ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
key words : vijay.shekar.sharma-founder-paytm-India-success-story-start-up-company