BENGALURU : ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಸ್ಫೋಟ, ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯ.

ಬೆಂಗಳೂರು, ನವೆಂಬರ್ ೧೮, ೨೦೨೧ (www.justkannada.in): ದಕ್ಷಿಣ ಬೆಂಗಳೂರು ಭಾಗದ ಇಟ್ಟಮಡುವಿನ ಮಂಜುನಾಥನಗರದ ಮನೆಯೊಂದರಲ್ಲಿ ಪಾರ್ಕ್ ಮಾಡಿದ್ದ ಕಾರೊಂದು ಸ್ಫೋಟಗೊಂಡ ಘಟನೆ ತಡ ರಾತ್ರಿ ನಡೆದಿದ್ದು, ಈ ಘಟನೆಯಲ್ಲಿ ಮೂವರು ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿಗೆ ಗಾಯಗಳಾಗಿವೆ.

ಅಗ್ನಿಶಾಮಕ ಇಲಾಖೆಯ ಮೂಲಗಳ ಪ್ರಕಾರ ಈ ಘಟನೆ ತಡರಾತ್ರಿ ೨.೩೦ರ ಸುಮಾರಿಗೆ ಜರುಗಿದೆ. ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಗಳನ್ನು ಹರೀಶ್, ರಾಜಶೇಖರ್ ಹಾಗೂ ಮುತ್ತಪ್ಪ ಎಂದು ಗುರುತಿಸಲಾಗಿದೆ.

ಘಟನೆಯ ಕುರಿತು ಮಾಹಿತಿ ಒದಗಿಸಿರುವ ಅಧಿಕಾರಿಗಳ ಪ್ರಕಾರ ಪಾರ್ಕಿಂಗ್ ಪ್ರದೇಶದ ಹೊರಗಡೆ ಇಟ್ಟಿದ್ದಂತಹ ಯುಪಿಎಸ್‌ನಿಂದಾಗಿ ಈ ಘಟನೆ ಜರುಗಿರಬಹುದು ಎಂದು ಶಂಕಿಸಲಾಗಿದೆ. “ಯುಪಿಎಸ್‌ನಿಂದ ಹೊರಚಿಮ್ಮಿದ ಕಿಡಿಯಿಂದಾಗಿ ಯುಪಿಎಸ್‌ನ ಬಾಕ್ಸ್ ಸುಟ್ಟು, ಮನೆಯ ಇಡೀ ನೆಲ ಮಹಡಿಗೆ ಬೆಂಕಿ ಹರಡಿತು. ಈ ಘಟನೆಯಲ್ಲಿ ಒಂದು ಕಾರು ಹಾಗೂ ಎರಡು ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ನಮ್ಮ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ ಕಾರು ಸ್ಫೋಟಗೊಂಡಿತು. ಇದರಿಂದಾಗಿ ನಮ್ಮ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಅವರಿಗೆ ಮುಖ, ಕೈ ಹಾಗೂ ಕಾಲುಗಳ ಮೇಲೆ ಸುಟ್ಟ ಗಾಯಗಳಾಗಿವೆ. ಪ್ರಸ್ತುತ ಅವರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,” ಎಂದು ಈ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಬೆಂಕಿ, ಇಡೀ ನೆಲಮಹಡಿಗೆ ಹರಡಿದರೂ ಸಹ ಅದೃಷ್ಟಕರವಾಗಿ ಯಾವುದೇ ಸಾವುನೋವು ಉಂಟಾಗಿಲ್ಲ. ಮನೆಯ ಎಲ್ಲಾ ಸದಸ್ಯರು ಸುರಕ್ಷಿತವಾಗಿ ಪಾರಾಗಿದ್ದಾರೆ. “ಮನೆಯಲ್ಲಿ ಆ ಸಮಯದಲ್ಲಿ ಮೂವರು ಸದಸ್ಯರಿದ್ದರು. ಬೆಂಕಿ ವ್ಯಾಪಿಸಿದ ನಂತರ ಮನೆಯ ತುಂಬಾ ದಟ್ಟವಾದ ಹೊಗೆ ತುಂಬಿಕೊಂಡಿತು. ಇದರಿಂದ ಗಾಬರಿಗೊಂಡ ಮನೆಯ ಸದಸ್ಯರು ಮಹಡಿಯ ಟೆರೇಸ್ ಮೇಲೆ ಓಡಿ, ಪಕ್ಕದ ಮನೆಯ ಮಹಡಿಗೆ ಜಿಗಿದು, ಟೆರೇಸ್‌ನ ಬಾಗಿಲು ಮುರಿದು ಹೇಗೋ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಅಗ್ನಿಶಾಮಕ ದಳದವರು ಮಾಹಿತಿ ದೊರೆತ ಕೆಲವೇ ಕ್ಷಣಗಳಲ್ಲಿ ಆಗಮಿಸಿದರು. ಆದರೆ ಸಿಬ್ಬಂದಿಗಳು ಬೆಂಕಿಗೆ ಆಹುತಿಯಾಗಿದ್ದಂತಹ ಕಾರಿನ ಬೆಂಕಿಯನ್ನು ನಂದಿಸುತ್ತಿದ್ದಾಗ ಸ್ಫೋಟಗೊಂಡಿತು,” ಎಂದು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : Bangalore-police-limits- 3 firemen- injured -after parked car burst- into flames