ಮಾಲೂರು,ನವೆಂಬರ್,20,2021(www.justkannada.in): ಬಿಜೆಪಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಮೇಲೆ ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬ ರಾಜಕಾರಣದ ಸುತ್ತ ಗಿರಕಿ ಹೊಡೆಯುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಇಲ್ಲಿ ನಡೆದ ಜನಸ್ವರಾಜ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಕೂಡ ಬಿಜೆಪಿ ಪ್ರಬಲವಾಗಿದೆ. ಪಕ್ಷದ ಸಂಸದರು, ವಿಧಾನ ಪರಿಷತ್ ಸದಸ್ಯರು ಇಲ್ಲಿಂದ ಆರಿಸಿ ಬಂದಿದ್ದಾರೆ. ಈಗ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್ ಅವರ ಪರ ಸ್ಪಷ್ಟ ಜನಾದೇಶವನ್ನು ನೀಡಬೇಕು. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿಯ ಇನ್ನೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗುತ್ತದೆ ಎಂದರು.
ಕಾಂಗ್ರೆಸ್ ದೇಶವನ್ನು ಆಳುತ್ತಿದ್ದಾಗ ಜಾತಿ, ಜನಾಂಗ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸಲಾಗಿತ್ತು. ಆದರೆ ಬಿಜೆಪಿ ಎಲ್ಲ ಸಮುದಾಯಗಳನ್ನೂ ಒಂದೆಡೆ ತಂದು, ರಾಷ್ಟ್ರವನ್ನು ಐಕ್ಯತೆಯಿಂದ ಬೆಸೆದಿದೆ ಎಂದು ಅವರು ಪ್ರತಿಪಾದಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಈಗ ಹತಾಶವಾಗಿವೆ. ಜನರನ್ನು ಹೇಗೆ ಬೇಕಾದರೂ ದಿಕ್ಕು ತಪ್ಪಿಸಬಹುದು ಎನ್ನುವ ಭ್ರಮೆ ಅವಕ್ಕಿವೆ. ಹೀಗಾಗಿ ಬಿಜೆಪಿ ವಿರುದ್ಧ ಅವು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು.
ದೇಶದಲ್ಲಿ ತಳಮಟ್ಟದಿಂದ ಹಿಡಿದು ಸಂಸತ್ತಿನವರೆಗೂ ಕಾರ್ಯಕರ್ತರನ್ನು ಮತ್ತು ನೆಲೆಯನ್ನು ಹೊಂದಿರುವ ಪಕ್ಷವೆಂದರೆ ಬಿಜೆಪಿಯೊಂದೇ. ಆವಿಷ್ಕಾರ, ತಂತ್ರಜ್ಞಾನ, ಶಿಕ್ಷಣ ಮೂರೂ ಬಿಜೆಪಿ ಆದ್ಯತೆಯಾಗಿದ್ದು, ಕೋಲಾರ ಜಿಲ್ಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಬದ್ಧವಾಗಿದೆ ಎಂದು ಸಚಿವರು ನುಡಿದರು.
ಬಿಜೆಪಿಗೆ ಇರುವಂತಹ ಜನಪರ ಬದ್ಧತೆ ಬೇರೆ ಯಾವ ಪಕ್ಷಗಳಿಗೂ ಇಲ್ಲ. ಬಂಗಾರದ ಜಿಲ್ಲೆಯಾದ ಕೋಲಾರವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಉದಾಸೀನ ಮಾಡುತ್ತ ಬಂದಿವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತಷ್ಟು ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಮುನಿರತ್ನ, ಗೊಪಾಲಯ್ಯ, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಮುಳಬಾಗಿಲು ಶಾಸಕ ನಾಗೇಶ್, ಮಾಜಿ ಶಾಸಕರಾದ ಸಂಪಂಗಿ, ಮುನಿವೆಂಕಟಪ್ಪ, ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರು, ಪುರಸಭಾ ಸದಸ್ಯರು ಪಾಲ್ಗೊಂಡಿದ್ದರು.
ವೇಣುಗೋಪಾಲ್ ನನ್ನ ಸ್ನೇಹಿತ`ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ವೇಣುಗೋಪಾಲ್ ಮತ್ತು ನಾನು ವೈದ್ಯಕೀಯ ಪದವಿ ಓದುವಾಗ ಸಹಪಾಠಿಗಳಾಗಿದ್ದೆವು. ಇಬ್ಬರೂ ಜತೆಯಲ್ಲೇ ಇಂಟರ್ನ್ ಶಿಪ್ ಮಾಡಿದ ಸ್ನೇಹಿತರು. ಸರ್ಜರಿ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅವರಿಗೆ ಜನಸೇವೆಯ ತುಡಿತ ಅಪಾರವಾಗಿದೆ. ಸಮಾಜದ ಬಗ್ಗೆ ಅವರಿಗೆ ನೈಜ ಕಳಕಳಿ ಇದೆ. ಇಂತಹ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಗೆಲ್ಲಿಸಬೇಕು. ಇದರಿಂದ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಒಳಿತಾಗುತ್ತದೆ’ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
key words:Janasvaraj Yatra-Minister -Ashwaththanarayan- against – Congress and JDS