ಬೆಂಗಳೂರು, ನವೆಂಬರ್ 25, 2021(www.justkannada.in): ಬೆಂಗಳೂರು ನಗರದಲ್ಲಿ ೮೮.೫೩ ಕಿಮೀಗಳಷ್ಟು ರಾಜಕಾಲುವೆಗಳಿಗೆ ಸಿಮೆಂಟ್ ಗೋಡೆಗಳನ್ನು ನಿರ್ಮಾಣ ಮಾಡುವ ಬಿಬಿಎಂಪಿಯ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಅಸ್ತು ಅಂದಿದ್ದಾರೆ.
ಈ ಯೋಜನೆಯು, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ಸುಮಾರು ೫೮ ಮಳೆ ನೀರು ಪೀಡಿತ ಪ್ರದೇಶಗಳನ್ನು ನೆರೆಪೀಡಿತ ಮುಕ್ತವನ್ನಾಗಿಸಲಿದ್ದು, ಈ ಯೋಜನೆಗೆ ಬರೋಬ್ಬರಿ ರೂ.೯೬೨ ಕೋಟಿ ಅಥವಾ ಪ್ರತಿ ಕಿ.ಮೀ.ಗೆ ರೂ.೧೦.೮೬ ಕೋಟಿಗಳಂತೆ ವೆಚ್ಚವಾಗಲಿದೆ. ಬಿಬಿಎಂಪಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಈಗಾಗಲೇ ರೂ.೨,೧೬೯ ಕೋಟಿ ವೆಚ್ಚದಲ್ಲಿ ೩೧೨ ಕಿಮೀಗಳಷ್ಟು ಉದ್ದದ ರಾಜಕಾಲುವೆಗಳಿಗೆ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟು ೮೪೨ ಕಿಮೀ ಗಳಷ್ಟು ಉದ್ದದ ಪ್ರಾಥಮಿಕ ಹಾಗೂ ಮಾಧ್ಯಮಿಕ ರಾಜಕಾಲುವೆಗಳಿವೆಯಂತೆ.
ಇತ್ತೀಚೆಗೆ ಸುರಿದಂತಹ ಭಾರಿ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಕೆರೆಗಳು ಹಾಗೂ ಚರಂಡಿಗಳ ಅಕ್ಕಪಕ್ಕದಲ್ಲಿರುವಂತಹ ಪ್ರದೇಶಗಳು ಎದುರಿಸಿದಂತಹ ಅಪಾರ ಪ್ರಮಾಣದ ಹಾನಿಯ ಹಿನ್ನೆಲೆಯಲ್ಲಿ ಬಿಬಿಎಂಪಿ ೮೮.೫೩ ಕಿಮೀಗಳಷ್ಟು ರಾಜಕಾಲುವೆಗಳನ್ನು ಮರುವಿನ್ಯಾಸಪಡಿಸಲು ಪ್ರಸ್ತಾಪಿಸಿತ್ತು. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಈ ರಾಜಕಾಲುವೆಗಳಿಗೆ, ಸುತ್ತಲಿನ ಪ್ರದೇಶಗಳಿಗೆ ಮಳೆ ನೀರು ನುಗ್ಗದಿರುವಂತೆ ತಡೆಗಟ್ಟುವ ಬಲಿಷ್ಠವಾದ ಗೋಡೆಗಳಿಲ್ಲದಿರುವುದೇ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಂತೆ.
ಮಾನ್ಯ ಮುಖ್ಯಮಂತ್ರಿಗಳ ಎದುರು ಬಿಬಿಎಂಪಿ ವತಿಯಿಂದ ಮಂಡಿಸಲಾದ ಒಂದು ಪ್ರೆಸೆಂಟೇಷನ್ ನಲ್ಲಿ, ಈ ಯೋಜನೆಯು ನಗರದಲ್ಲಿರುವ ನೆರೆಪೀಡಿತ ಸಂಭವವಿರುವ ಒಟ್ಟು ೯೬ ಪ್ರದೇಶಗಳ ಪೈಕಿ ೫೮ ಪ್ರದೇಶಗಳನ್ನು ವ್ಯಾಪಿಸುತ್ತದೆ ಎಂದು ವಿವರಿಸಲಾಯಿತು.
ಈ ಯೋಜನೆಯ ರೂ.೯೬೨ ಕೋಟಿ ಅಂದಾಜು ವೆಚ್ಚದ ಪೈಕಿ ಗರಿಷ್ಠ ಮೊತ್ತವನ್ನು ಬೊಮ್ಮನಹಳ್ಳಿ (ರೂ.೨೫೬ ಕೋಟಿ), ಯಲಹಂಕ (ರೂ.೧೬೪ ಕೋಟಿ) ಹಾಗೂ ಆರ್ ಆರ್ ನಗರ (ರೂ.೧೫೩ ಕೋಟಿ) ಈ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಈ ಎಲ್ಲಾ ಬಡಾವಣೆಗಳು ನಗರದ ಹೊರವಲಯಗಳಲ್ಲಿದ್ದು ಭಾರಿ ಮಳೆ ಬಂದ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತವೆ.
ಬುಧವಾರದಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಅವರ ಇತರೆ ಹಲವು ಕ್ಯಾಬಿನೆಟ್ ಸಹೋದ್ಯೋಗಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಗಳು ರಾಜಕಾಲುವೆಗಳ ಮರುವಿನ್ಯಾಸಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಈ ಸಂಬಂಧ ಪತ್ರಕರ್ತರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, “ನಾನು ಈ ಯೋಜನೆಗೆ ಸಂಬಂಧಿಸಿದಂತೆ ಒಂದು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ಮಳೆಗಾಲದ ವೇಳೆಗೆ ಈ ಯೋಜನೆ ಪೂರ್ಣಗೊಳಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ವಿವರಿಸಿದರು.
ರಾಜಕಾಲುವೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳ ಅಸಮಾಧನ
ಬಿಬಿಎಂಪಿಯ ರಾಜಕಾಲುವೆ ವಿಭಾಗದ ಅಧಿಕಾರಿಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆಯೇ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಖ್ಯಮಂತ್ರಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ರಾಜಕಾಲುವೆಗಳ ಮರುವಿನ್ಯಾಸಕ್ಕೆ (ಮರುಮಾದರಿ) ಸಂಬಂಧಪಟ್ಟಂತೆ ಕೇಳಿದ ಕೆಲವು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸುವಲ್ಲಿ ವಿಫಲರಾದರು ಎನ್ನಲಾಗಿದೆ.
ಬಹಳ ವಿನಾಶಕಾರಿ ಯೋಜನೆ
ಲಾಭದ ಉದ್ದೇಶ ಇಲ್ಲದಿರುವಂತಹ ಒಂದು ಸಂಸ್ಥೆ ‘ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್’ನ (ಇಎಸ್‌ಜಿ-ಸರ್ಕಾರೇತರ ಸಂಸ್ಥೆ) ಸಂಯೋಜಕ ಲಿಯೊ ಸಲ್ಡಾನ್ಹಾ ಅವರು ಈ ಯೋಜನೆಯನ್ನು ಒಂದು ವಿನಾಶಕಾರಿ ಯೋಜನೆಯೆಂದು ತಿಳಿಸಿದ್ದಾರೆ.
“ರಾಜಕಾಲುವೆಗಳ ಇಕ್ಕೆಲಗಳಲ್ಲಿ ಈ ರೀತಿ ಕಾಂಕ್ರೀಟ್ ಗೋಡೆಗಳನ್ನು ಕಟ್ಟುವುದರಿಂದ ಮಳೆ ನೀರು ಸೋರುವಿಕೆಯನ್ನು ತಡೆಗಟ್ಟುತ್ತದೆ ಹಾಗೂ ನೀರಿನ ಹರಿವು ಅಥವಾ ವೇಗವನ್ನು ಹೆಚ್ಚಿಸುತ್ತದೆ. ಈ ಪ್ರಕಾರವಾಗಿ ಇದೊಂದು ವಿನಾಶಕಾರಿ ಆಯುಧದಂತಾಗಬಹುದು. ಇದರಿಂದ ಕೆಳಹಂತದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮೇಲೆ ಪರಿಣಾಮ ಉಂಟಾಗಬಹುದು. ಇದೊಂದು ಅಪ್ರಬುದ್ಧ ಇಂಜಿನಿಯರಿಂಗ್ ಮಾದರಿಯಾಗಿದ್ದು, ಕೇವಲ ಗುತ್ತಿಗೆದಾರರು ಹಾಗೂ ರಾಜಕಾರಣಿಗಳಿಗೆ ಸಹಾಯವಾಗುವಂತೆ ಅಭಿವೃದ್ಧಿಪಡಿಸಿರುವ ಯೋಜನೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬದಲಿಗೆ ನೈಸರ್ಗಿಕ ಮಾರ್ಗಗಳ ಮೂಲಕ ಚರಂಡಿಗಳನ್ನು ಅಭಿವೃದ್ಧಿಪಡಿಸುವಂತೆಯೂ ಅವರು ಸೂಚಿಸಿದ್ದಾರೆ.
“ಬಿಬಿಎಂಪಿಯ ಈ ವಿವೇಚನೆಯ ದೃಷ್ಟಿಯಲ್ಲಿ ನೋಡಿದರೆ ನದಿಗಳಿಗೂ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಬೇಕಾಗುತ್ತದೆ. ಅದಕ್ಕಿಂತ ರಾಜಕಾಲುವೆಗಳ ಇಕ್ಕೆಲಗಳಲ್ಲಿ ಮರಗಳನ್ನು ನೆಡುವುದು ಹೆಚ್ಚು ಸೂಕ್ತ. ಈ ರೀತಿ ಮರಳನ್ನು ಸ್ಥಿರಗೊಳಿಸಲು ಇನ್ನೂ ಅನೇಕ ವಿಧಾನಗಳಿವೆ. ಅದರಿಂದ ರಾಜಕಾಲುವೆಗಳಲ್ಲಿ ಮಳೆನೀರಿನ ಹರಿವಿನ ವೇಗವೂ ಕಡಿಮೆಯಾಗಿ, ನೀರೂ ಸಹ ಶುದ್ಧೀಕರಣಗೊಳ್ಳುತ್ತದೆ,” ಎನ್ನುವುದು ಅವರ ಅಭಿಪ್ರಾಯವಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: BBMP -solution -Bangalore city-flood- control