ನವ ದೆಹಲಿ, ನವೆಂಬರ್ ೩೦, ೨೦೨೧ (www.justkannada.in): ಟ್ವಿಟ್ಟರ್‌ನ ಸಹ-ಸ್ಥಾಪಕ ಜ್ಯಾಕ್ ಡಾರ್ಸೆ ಅವರು ಸಂಸ್ಥೆಯಿಂದ ನಿರ್ಗಮಿಸಿದ್ದಾರೆ. ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಅವರು ಸೋಮವಾರದಂದು ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಅವರ ಸ್ಥಾನವನ್ನು ತುಂಬಿದ್ದಾರೆ. ಆದರೆ ಈತ ಮೂಲತಃ ಯಾರು ಎಂಬ ಪ್ರಶ್ನೆ ಈಗ ವಿಶ್ವದಾದ್ಯಂತ, ಅದರಲ್ಲಿಯೂ ವಿಶೇಷವಾಗಿ ಭಾರತೀಯರನ್ನು ಕಾಡುತ್ತಿದೆ.
ಭಾರತೀಯರು ಬಹುತೇಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಎಲ್ಲಾ ದಿಗ್ಗಜ ಸಂಸ್ಥೆಗಳ ಪ್ರಮುಖ ಸ್ಥಾನವನ್ನು ಅಲಂಕರಿಸಿ ಈಗಾಗಲೇ ಇಡೀ ವಿಶ್ವದ ಗಮನವನ್ನ ಸೆಳೆದಿದ್ದಾರೆ. ಈಗ ಅಗರ್‌ವಾಲ್ ಅವರ ಸರದಿ.
ಈತ ೨೦೧೧ರಿಂದಲೂ ಮೈಕ್ರೊಬ್ಲಾಗ್ಗಿಂಗ್ ದಿಗ್ಗಜ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಓರ್ವ ಸಾಫ್ಟ್ವೇರ್ ಇಂಜಿನಿಯರ್ ಆಗಿ ತನ್ನ ವೃತ್ತಿಯನ್ನು ಆರಂಭಿಸಿದ ಅಗರ್‌ವಾಲ್ ಅವರು ೨೦೧೭ರಲ್ಲಿ ಮೈಕ್ರೊಬ್ಲಾಗ್ಗಿಂಗ್ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡರು. ಈತನನ್ನು ಸಂಸ್ಥೆಯ ನಿರ್ದೇಶಕರ ಮಂಡಳಿ ಸದಸ್ಯರು ಸರ್ವಾನುಮತದಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡಿದರು.
ಟ್ವಿಟ್ಟರ್‌ನ ಈ ನೂತನ ಮುಖ್ಯಸ್ಥ ಭಾರತದ ಬಾಂಬೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಹಳೆಯ ವಿದ್ಯಾರ್ಥಿಯಾಗಿದ್ದು, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್‌ನಲ್ಲಿ ಬಿ.ಟೆಕ್. ಪದವಿಯನ್ನು ಹೊಂದಿದ್ದಾರೆ. ನಂತರದಲ್ಲಿ ಇವರು ಸ್ಟಾö್ಯನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಪಿಹೆಚ್‌ಡಿ ಪದವಿಯನ್ನೂ ಪಡೆದುಕೊಂಡಿದ್ದಾರೆ.
ಟ್ವಿಟ್ಟರ್ ಅನ್ನು ಸೇರುವ ಮುಂಚೆ ಅಗರ್‌ವಾಲ್ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳಾದ Yahoo, Microsoft ಮತ್ತು AT&T ಗಳ ಸಂಶೋಧನಾ ತಂಡಗಳ ಜೊತೆಗೂ ಕೆಲಸ ನಿರ್ವಹಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಅಧಿಕಾರವನ್ನು ವಹಿಸಿಕೊಂಡ ನಂತರ ಅಗರ್‌ವಾಲ್, ಸಂಸ್ಥೆಯ ಹೊರಹೋಗುತ್ತಿರುವ ಸಿಇಒ ಡಾರ್ಸೆ ಅವರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಡಾರ್ಸೆ ಅವರು ತಮ್ಮ ಮೇಲಿರಿಸಿರುವ ವಿಶ್ವಾಸಕ್ಕೆ ತಾನು ಋಣಿ ಎಂದಿದ್ದಾರೆ. “ಜ್ಯಾಕ್ ಹಾಗೂ ಅವರ ಇಡೀ ತಂಡಕ್ಕೆ ನಾನು ನನ್ನ ಹೃತ್ಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮತ್ತು ಅವರ ಭವಿಷ್ಯ ಮತ್ತಷ್ಟು ರೋಚಕ ಹಾಗೂ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ. ನಾನು ಕಂಪನಿಗೆ ಕಳುಹಿಸಿರುವ ಟಿಪ್ಪಣಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವು ನನ್ನ ಮೇಲಿಸಿರುವ ವಿಶ್ವಾಸ ಹಾಗೂ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು,” ಎಂದು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಂದ ಹಾಗೆ ಪರಾಗ್ ಅಗರ್‌ವಾಲ್ ಅವರು ೨೦೦೧ರಲ್ಲಿ ಅಟಾಮಿಕ್ ಎನರ್ಜಿ ಸೆಂರ್ರಿಲ್ ಸ್ಕೂಲ್ ನಂ. ೪ರಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು. ಟರ್ಕಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಸಿಕ್ಸ್ (ಭೌತಶಾಸ್ತç) ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಇವರ ತಾಯಿ ಓರ್ವ ನಿವೃತ್ತ ಶಾಲಾ ಶಿಕ್ಷಕಿ ಮತ್ತು ತಂದೆ ಅಟಾಮಿಕ್ ಎನರ್ಜಿ ಸಂಸ್ಥೆಯಲ್ಲಿ ಹಿರಿಯ ಸ್ಥಾನದಲ್ಲಿದ್ದರು. ಇವರ ಪತ್ನಿ ವಿನೀತಾ ಸ್ಟಾö್ಯನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಬಯೊಫಿಸಿಕ್ಸ್ನಲ್ಲಿ ಪದವಿಯನ್ನು ಪಡೆದಿದ್ದು, ಹಾರ್‌ವರ್ಡ್ ಮೆಡಿಕಲ್ ಸ್ಕೂಲ್/ಎಂಐಟಿಗಳಲ್ಲಿ ಎಂಡಿ ಹಾಗೂ ಪಿಹೆಚ್‌ಡಿ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಈಕೆ ಸಾಹಸೋದ್ಯಮ ಬಂಡವಾಳ ಹೂಡಿಕೆಯ ದಿಗ್ಗಜ ಸಂಸ್ಥೆ ಅಂಡ್ರೀಸೀನ್ ಹರಾವಿಟ್ಝ್ನಲ್ಲಿ ಪ್ರಧಾನ ಪಾಲುದಾರರಾಗಿದ್ದಾರೆ.
People Ai ಪ್ರಕಾರ ಪ್ರಸ್ತುತ ಅಗರ್‌ವಾಲ್ ಅವರು ವಾರ್ಷಿಕ ೧.೫೨ ದಶಲಕ್ಷ ಡಾಲರ್ (ರೂ.೧೧.೪೧ ಕೋಟಿ) ಸಂಬಳವನ್ನು ಪಡೆದುಕೊಳ್ಳಲಿದ್ದಾರಂತೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
key words : tweeter-CEO-parag-india