ಬೆಂಗಳೂರು, ಡಿಸೆಂಬರ್,2, 2021 (www.justkannada.in): ರಾಜ್ಯ ಸರ್ಕಾರ ಸ್ವಾಮ್ಯದ ಇಂಜಿನಿಯರಿಂಗ್ ಕಾಲೇಜುಗಳಿಗೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಮೂಲಕ ಪಡೆಯುವ ಪ್ರವೇಶ ಶುಲ್ಕವನ್ನು ಈ ಶೈಕ್ಷಣಿಕ ವರ್ಷದಿಂದ ರೂ.೧೦,೦೦೦ದಷ್ಟು ಹೆಚ್ಚಿಸಿದೆ.
ಮೊದಲನೇ ಸುತ್ತಿನಲ್ಲಿ ಸೀಟುಗಳ ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಶುಲ್ಕವನ್ನು ಪಾವತಿಸಲು ಹೋದಂತಹ ವಿದ್ಯಾರ್ಥಿಗಳಿಗೆ ಈ ಶುಲ್ಕ ಹೆಚ್ಚಳ ಒಂದು ದೊಡ್ಡ ಆಘಾತವಾಗಿ ಪರಿಣಮಿಸಿದೆ. ಹೌದು, ಈಗ ಸರ್ಕಾರಿ ಸ್ವಾಮ್ಯದ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ರೂ.೨೩,೦೦೦ ದಿಂದ ರೂ.೩೩,೦೦೦ಕ್ಕೆ ಹೆಚ್ಚಳವಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನಗೊಂಡಿದ್ದಾರೆ. ಆದರೆ ಉನ್ನತ ಶಿಕ್ಷಣ ಇಲಾಖೆಯು ಈ ಶುಲ್ಕ ಹೆಚ್ಚಳದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ಕಾಲೇಜುಗಳ ಮೂಲಭೂತಸೌಕರ್ಯ ಅಭಿವೃದ್ಧಿಗೆ ಅನುಕೂಲವಾಗುವುದರ ಜೊತೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬೇಡಿಕೆಯೂ ಹೆಚ್ಚಾಗುತ್ತದೆ ಎಂದಿದೆ.
“ಕೋವಿಡ್-19 ನಮಗೆ ಈಗಾಗಲೇ ಸಾಕಷ್ಟು ಹಣಕಾಸಿನ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಇಂತಹ ಸಮಯದಲ್ಲಿ ಇದು ನಮಗೆ ಆಘಾತವನ್ನುಂಟು ಮಾಡಿದೆ,” ಎಂದು ಓರ್ವ ಪೋಷಕರು ತಮ್ಮ ಅಳಲನ್ನು ತೋಡಿಕೊಂಡರೆ, ಮತ್ತೋರ್ವ ಪೋಷಕರು, “ನಮಗೆ ರೂ.೨೫,೦೦೦ ಕಟ್ಟುವುದೇ ಕಷ್ಟವಾಗಿರುವಾಗ ಸರ್ಕಾರ ಶುಲ್ಕ ಹೆಚ್ಚಳ ಮಾಡಿದರೆ ನಿಭಾಯಿಸುವುದು ಹೇಗೆ ಸಾಧ್ಯ?” ಎಂದು ತಮ್ಮ ಕೋಪವನ್ನು ಹೊರಹಾಕಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಒದಗಿಸಿರುವ ಒಂದು ಮಾಹಿತಿಯ ಪ್ರಕಾರ, ಈ ಹೊಸ ಶುಲ್ಕ ರೂ.೩೩,೮೧೦, ವಿಶ್ವವಿದ್ಯಾಲಯದ ಶುಲ್ಕವನ್ನೂ ಒಳಗೊಂಡಿದ್ದು, ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ಮೂಲಭೂತಸೌಕರ್ಯ ಅಭಿವೃದ್ಧಿಗಾಗಿ ಕಾಲೇಜುಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Karnataka government- engineering -colleges -Increase-fee