ನವದೆಹಲಿ,ಡಿಸೆಂಬರ್,9,2021(www.justkannada.in): ರೈತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟ ಅಂತ್ಯವಾಗಿದೆ.
ಈ ಕುರಿತು ಸಿಂಘಗಡಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು, ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಹಿನ್ನೆಲೆ ಹೋರಾಟ ಹಿಂಪಡೆಯುತ್ತಿದ್ದೇವೆ. ಡಿಸೆಂಬರ್ 11 ರಂದು ರೈತರು ದೆಹಲಿಯಿಂದ ವಾಪಸ್ ಆಗುತ್ತಾರೆ ಡಿಸೆಂಬರ್ 13 ರಂದು ಸ್ವರ್ಣ ಮಂದಿರಕ್ಕೆ ತೆರಳಲಿದ್ದೇವೆ. ನಾವು ದೊಡ್ಡ ಗೆಲುವು ಪಡೆದು ವಾಪಸ್ ಆಗುತ್ತಿದ್ದೇವೆ. ಸರ್ಕಾರ ಭರವಸೆ ಈಡೇರಿಸದಿದ್ದರೇ ಮತ್ತೆ ಹೋರಾಟ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ಕಳೇದ 13 ತಿಂಗಳಿನಿಂದ ರೈತರು ಹೋರಾಟ ನಡೆಸುತ್ತಿದ್ದರು. ದೀರ್ಘಕಾಲ ನಡೆಸುತ್ತಿದ್ದ ಹೋರಾಟವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ತೆಗೆದುಕೊಂಡಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಐವರು ಸಮಿತಿ ಸದಸ್ಯರಲ್ಲಿ ಒಬ್ಬರಾದ ಅಶೋಕ್ ಧಾವ್ಲೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕು ಹಾಗೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ 2020ರ ನವೆಂಬರ್ ನಿಂದ ಹೋರಾಟ ಆರಂಭಿಸಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ಲೋಕಸಭೆಯಲ್ಲಿ ಕಾಯ್ದೆಯನ್ನು ರದ್ದುಗೊಳಿಸಲಾಗಿತ್ತು.
Key words: Center -agreed – demand-End-farmers- protest