ಬೆಂಗಳೂರು, ಡಿಸೆಂಬರ್ 17, 2021 (www.justkannada.in): ಕರ್ನಾಟಕದಲ್ಲಿ ಹೆಲಿಟೂರಿಸಂ ಅನ್ನು ಪ್ರೋತ್ಸಾಹಿಸಲು ಹೆಲಿಕಾಪ್ಟರ್ ಸಾರಿಗೆ ಸಂಸ್ಥೆ ‘ಬ್ಲೇಡ್’, ಬೆಂಗಳೂರಿನಿಂದ ಕೊಡಗು ಹಾಗೂ ಕಬಿನಿ ಮಾರ್ಗಗಳಲ್ಲಿ ಹೊಸದಾಗಿ ನಿಗದಿತ ಆಸನಗಳುಳ್ಳ ಹೆಲಿಕಾಪ್ಟರ್ ಸೇವೆಗಳನ್ನು ಆರಂಭಿಸಿದೆ.
ಕೂರ್ಗ್ ಎಂದೂ ಕರೆಯಲ್ಪಡುವ ಕೊಡಗು ಹಾಗೂ ಕಬಿನಿ ಹೆಲಿಕಾಪ್ಟರ್ ಸೇವೆಗಳಿರುವ ಕರ್ನಾಟಕ ರಾಜ್ಯದ ಎರಡು ಪ್ರಮುಖ ಪ್ರವಾಸಿ ತಾಣಗಳ ಪೈಕಿ ಸೇರಿವೆ. ಯುಎಸ್ ಮೂಲದ ಹೆಲಿಕಾಪ್ಟರ್ ಸಾರಿಗೆ ಸಂಸ್ಥೆಯ ಭಾರತೀಯ ಅಂಗವಾಗಿರುವ ‘ಬ್ಲೇಡ್’ ತನ್ನ ವಾರಾಂತ್ಯದ ಖಾಸಗಿ ಚಾರ್ಟರ್ ಸೇವೆಗಳೊಂದಿಗೆ ಡಿಸೆಂಬರ್ ೨೦೨೦ರಲ್ಲಿ ರಾಜ್ಯವನ್ನು ಪ್ರವೇಶಿಸಿತು.
ಕಂಪನಿ ತಿಳಿಸಿರುವ ಪ್ರಕಾರ, “ಈ ಎರಡು ಮಾರ್ಗಗಳಲ್ಲಿ ನಮ್ಮ ಸೇವೆಗಳನ್ನು ಆರಂಭಿಸುವುದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಎರಡು ನಗರಗಳಿಗೆ ಪ್ರಯಾಣ ಅವಧಿ ೬-೭ ಗಂಟೆಗಳಷ್ಟು ಕಡಿಮೆಯಾಗಿದೆ,” ಎಂದಿದೆ.
ಬ್ಲೇಡ್ ಸಂಸ್ಥೆಯ ಎಂಡಿ ಅಮಿತ್ ದತ್ತಾ ಅವರು ಮಾತನಾಡಿ, “ಕರ್ನಾಟಕ ರಾಜ್ಯ ದೇಶದ ಕೆಲವು ಅತೀ ಸುಂದರವಾಗಿರುವಂತಹ ಪ್ರವಾಸಿ ತಾಣಗಳನ್ನು ಹೊಂದಿದೆ. ಆದರೆ ಅಲ್ಲಿಗೆ ತಲುಪಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ದುರಾದೃಷ್ಟಕರ. ಬೆಂಗಳೂರಿನಿಂದ ಪ್ರವಾಸಿ ತಾಣಗಳಿಗೆ ತಲುಪಬೇಕಾದರೆ ಜನರು ೬-೭ ಗಂಟೆಗಳ ಕಾಲ ಪ್ರಯಾಣಿಸಬೇಕು. ಇದು ಬಹಳ ತ್ರಾಸದಾಯಕವೂ ಆಗಿದ್ದು ಪ್ರವಾಸಿಗರ ಅಮೂಲ್ಯ ಸಮಯ ಹಾಳಾಗಿ, ರಜೆಗಳನ್ನು ಆನಂದಿಸುವ ಅವರ ಆಸೆ ಸರಿಯಾಗಿ ಕೈಗೂಡುವುದಿಲ್ಲ. ಈ ಹಿನ್ನೆಲೆಯಲ್ಲಿ ‘ಬ್ಲೇಡ್’ ಪ್ರವಾಸಿಗರಿಗೆ ತಮ್ಮ ರಜಾ ದಿನಗಳ ಪ್ರವಾಸವನ್ನು ಆನಂದಿಸಲು ನೆರವಾಗಲಿದೆ,” ಎಂದು ವಿವರಿಸಿದರು.
ಸಂಸ್ಥೆಯ ಪ್ರಕಾರ ರಸ್ತೆಯ ಮೂಲಕ ತಲುಪಲು ಕಷ್ಟಕರವಾಗಿರುವಂತಹ ಪ್ರವಾಸಿ ಮಾರ್ಗಗಳಿಗೆ ವಾಯು ಸಾರಿಗೆ ವ್ಯವಸ್ಥೆಯ ಮೂಲಕ ಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಕಂಪನಿಯು ‘ಎವಾಲ್ವ್ ಬ್ಯಾಕ್ ರೆಸಾರ್ಟ್ಸ್ನೊಂದಿಗೂ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಇದು ಗ್ರಾಹಕರಿಗೆ ಹೆಲಿಕಾಪ್ಟರ್ ಪ್ರಯಾಣವನ್ನಷ್ಟೇ ಅಲ್ಲದೆ ಮುಂಚಿತವಾಗಿಯೇ ತಮ್ಮ ವಸತಿ ವ್ಯವಸ್ಥೆಯನ್ನೂ ಸಹ ಕಾಯ್ದಿರಿಸಿಕೊಂಡು ಕೇವಲ ಒಂದೇ ಒಂದು ಗಂಟೆಯೊಳಗೆ ನೇರವಾಗಿ ರೆಸಾರ್ಟ್ಸ್ ನಲ್ಲಿಯೇ ಇಳಿಯಬಹುದಾಗಿದೆ.
ಬ್ಲೇಡ್ ಇಂಡಿಯಾ, ನ್ಯೂಯಾರ್ಕ್ ನಲ್ಲಿ ಕೇಂದ್ರ ಸ್ಥಾನವನ್ನು ಹಾಗೂ ದೆಹಲಿ ಮೂಲದ ವೆಂಚ್ಯೂರ್ ಕ್ಯಾಪಿಟಲ್ ಸಂಸ್ಥೆ ಹಂಚ್ ವೆಂಚ್ಯರ್ಸ್ ನ ‘ಬ್ಲೇಡ್ ಅರ್ಬನ್ ಏರ್ ಮೊಬಿಲಿಟಿ ಇಂಕ್,’ನ ಒಂದು ಜಂಟಿ ಉದ್ಯಮವಾಗಿದ್ದು, ೨೦೧೯ರಲ್ಲಿ ಮಹಾರಾಷ್ಟ್ರದಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿತು.
ಕಂಪನಿಯ ವೆಬ್ ಸೈಟ್ ಪ್ರಕಾರ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಕೊಡಗಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲು ಒಬ್ಬರಿಗೆ ರೂ.೧೬,೦೦೦ ವೆಚ್ಚವಾಗುತ್ತದೆ.
ಈ ನಡುವೆ ಜೂನ್ ೨೦೨೧ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಹೆಲಿಟೂರಿಸಂ ಉದ್ದೇಶಗಳಿಗಾಗಿ ಜಕ್ಕೂರು ವಿಮಾನ ನಿಲ್ದಾಣ ಹಾಗೂ ಇನ್ನೂ ಐದು ಇತರೆ ಏರ್‌ಸ್ಟ್ರಿಪ್‌ಗಳನ್ನು ಉಪಯೋಗಿಸಿಕೊಳ್ಳಲು ಯುವಜನ ಹಾಗೂ ಕ್ರೀಡಾ ಸೇವೆಗಳ ಇಲಾಖೆ ಮತ್ತು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಗಳಿಂದ (ಎಐಐ) ಅನುಮೋದನೆಯನ್ನು ಪಡೆದುಕೊಂಡಿತು.
ರಾಜ್ಯ ಸರ್ಕಾರವು ಪ್ರವಾಸಿ ಹೆಲಿಕಾಪ್ಟರ್ ಗಳ ಲ್ಯಾಂಡಿಂಗ್ ಹಾಗೂ ಟೇಕ್-ಆಫ್‌ಗಳಿಗಾಗಿ ಜಕ್ಕೂರು ವಿಮಾನ ನಿಲ್ದಾಣದ ಸ್ಥಳವನ್ನು ಬಳಸಿಕೊಳ್ಳಲು ಯೋಜಿಸುತಿತ್ತು. ಇಲಾಖೆಯೂ ಸಹ ಗೋವಾ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ಪ್ರವಾಸಿತಾಣಗಳಿಗೆ ಪ್ರವಾಸಗಳನ್ನು ಏರ್ಪಡಿಸಲು ಯೋಜನೆಯನ್ನು ರೂಪಿಸಿದೆ.
ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್
Key words: Promotion – Heli Tourism – Karnataka-Launch – helicopter services –Bangalore- Kodagu-Kabini