ಬೆಂಗಳೂರು,ಜನವರಿ,1,2022(www.justkannada.in): ಕಾಂಗ್ರೆಸ್ ಸರ್ಕಾರ ಆರು ವರ್ಷ ಆಡಳಿತ ಮಾಡಿದೆ. ಆಗ ಮೇಕೆದಾಟು ಯೋಜನೆಗೆ ಎಷ್ಟು ಹಣ ಮೀಸಲಿಟ್ಟಿದ್ದರು. ಅಧಿಕಾರವಿದ್ಧಾಗ ಏನು ಮಾಡಲಿಲ್ಲ. ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡಲು ಹೊರಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕುರಿತು ಟೀಕಿಸಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ಪಾದಯಾತ್ರೆಯಿಂದ ಜನರಿಗೆ ಅನುಕೂಲ ಆಗುವುದಲ್ಲ. ಅವರ ಪಕ್ಷಕ್ಕೆ ಅನುಕೂಲವಾಗಲು ಪಾದಯಾತ್ರೆ ಮಾಡುತ್ತಿದ್ದಾರೆ ಅಷ್ಟೇ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರು ವರ್ಷ ಅಧಿಕಾರದಲ್ಲಿತ್ತು. ಐದು ವರ್ಷ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ನಯಾ ಪೈಸಾ ನೀರಾವರಿಗೆ ಮೀಸಲಿಡಲಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಈಗ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಟಾಂಗ್ ನೀಡಿದರು.
ಜನರ ಬಗ್ಗೆ ಕಾಂಗ್ರೆಸ್ ನವರಿಗೆ ಕಿಂಚಿತ್ ಕಾಳಜಿ ಇಲ್ಲ. ಮೇಕೇದಾಟು ಬಗ್ಗೆ ಈಗ ಮೈ ಪರಚಿಕೊಳ್ಳುತ್ತಿದ್ದಾರೆ. ಇವರಿಗೆ ನಿಜವಾಗಿ ಕಾಳಜಿ ಇದ್ದರೆ ಅಧಿಕಾರದಲ್ಲಿ ಇದ್ದಾಗಲೇ ಯೋಜನೆ ಜಾರಿ ಮಾಡುತ್ತಿದ್ದರು. ಡಿಪಿಆರ್ ಮಾಡಲು ಆರು ವರ್ಷ ಬೇಕಿತ್ತಾ ಎಂದು ಸಚಿವ ಆರ್.ಅಶೋಕ್ ಪ್ರಶ್ನಿಸಿದರು.
Key words: Gimmick –Congress-padayatre-Minister- R. Ashok -criticized.