ಬೆಂಗಳೂರು, ಜನವರಿ 06, 2022 (www.justkannada.in): ವೀಕೆಂಡ್ ಲಾಕ್ಡೌನ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರರಂಗದವರಿಂದ ಬಹುತೇಕ ವಿರೋಧವೇ ವ್ಯಕ್ತವಾಗಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಸರ್ಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ದುನಿಯಾ ವಿಜಯ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಸಹ ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರ್ಕಾರ ಹೊರಡಿಸಿರುವ ವೀಕೆಂಡ್ ಲಾಕ್‌ಡೌನ್ ಮತ್ತು 50% ನಿಯಮದ ಬಗ್ಗೆ ಕವಿರಾಜ್ ತಮ್ಮ ಅಸಹಮತ ವ್ಯಕ್ತಪಡಿಸಿದ್ದು, ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.
ಕವಿರಾಜ್ ಫೇಸ್‌ಬುಕ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ….
”ಒಮಿಕ್ರಾನ್ ವೇಗವಾಗಿ ಹರಡುವುದಾದರು ಅದು ಪ್ರಾಣಾಪಾಯ ತರುವುದಿಲ್ಲ ಎಂದು ಸ್ವತಃ WHO ಹೇಳಿದೆ. ಅದೇ ಪ್ರಕಾರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರು ಆಸ್ಪತ್ರೆ ಸೇರುತ್ತಿರುವವರ ಅನುಪಾತ ಬಹಳ ಕಡಿಮೆಯೇ ಇದೆ. ಸಾಮರ್ಥ್ಯದ ಮಾಪನದಲ್ಲಿ ಒಮಿಕ್ರಾನ್ ಈಗಾಗಲೇ ಶಕ್ತಿಗುಂದಿರುವ ಕೊರೊನಾ ವೈರಾಣು” ಎಂದಿದ್ದಾರೆ ಕವಿರಾಜ್.
”ಒಮಿಕ್ರಾನ್ ಒಂದು ಸಾಮಾನ್ಯ ಶೀತ , ಕೆಮ್ಮಿನಂತೆ ಕಾಡುವುದು. ಅದು ಒಮ್ಮೆ ಎಲ್ಲರಿಗೂ ಬಂದು ಹೋದರೆ ಒಂದು ಲೆಕ್ಕಾಚಾರದಲ್ಲಿ ಒಳ್ಳೆಯದೆ . ಅದರಿಂದ ಹರ್ಡ್ ಇಮ್ಯೂನಿಟಿ ಬೆಳೆಯುತ್ತದೆ. ಆ ಮೂಲಕ ಪ್ಯಾಂಡೆಮಿಕ್ ಎಂಡೆಮಿಕ್ ಹಂತ ತಲುಪಲಿದೆ ಎಂದು WHO ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸೇರಿದಂತೆ ಹಲವು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಆದರೂ ಸರ್ಕಾರಗಳು ಈ ಬೆದರು ಬೊಂಬೆಯಂತೆ ಲಾಕ್ ಡೌನ್ ಬಗ್ಗೆ ಯಾಕೆ ಚಿಂತಿಸುತ್ತಿವೆಯೋ” ಎಂದು ಅಮಸಮಾಧಾನ ವ್ಯಕ್ತಪಡಿಸಿದ್ದಾರೆ ಕವಿರಾಜ್.
”ಈಗಾಗಲೇ ಸುಮಾರು 20 ತಿಂಗಳಿಂದ ಈ ಕರೊನಾ, ಲಾಕ್ ಡೌನ್ ಹೊಡೆತಕ್ಕೆ ಸಿಲುಕಿ ಬಡ ಮತ್ತು ಮದ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಜರ್ಝರಿತವಾಗಿದೆ. ಹೇಗೊ ಒದ್ದಾಡಿ ಚಿಗುರುತ್ತಿರುವ ಹೊತ್ತಿಗೆ ಮತ್ತೆ ಲಾಕ್‌ಡೌನ್ ಹೇರಿದರೆ ಅವರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಆಗ ಕರೊನಾದಿಂದ ಸಾಯುವವರ ಸಂಖ್ಯೆಗಿಂತ ಹಸಿವು , ಹತಾಶೆ , ನಿರುದ್ಯೋಗ, ಆರ್ಥಿಕ ಜಂಜಾಟ , ಸಾಲಗಾರರ ಕಿರುಕುಳ , ಅವಮಾನದಿಂದ ಸಾಯುವವರ ಸಂಖ್ಯೆಯೇ ಜಾಸ್ತಿಯಾಗಲಿದೆ” ಎಂದು ಅಂದಾಜಿಸಿದ್ದಾರೆ ಕವಿರಾಜ್.
”ಈ ನಡುವೆ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ಸಮಾವೇಶಗಳನ್ನು ನಡೆಸಿ ಬೀಗುತ್ತಿರುವ ರಾಜಕಾರಣಿಗಳು ಜನರು ಸಹಕರಿಸದಿರುವುದೇ ಕರೊನಾ ಹೆಚ್ಚಾಗಲು ಕಾರಣ ಎಂದು ತಪ್ಪನ್ನು ಜನರ ಮೇಲೆ ಹೇರಲು ಪ್ರಯತ್ನಿಸುತ್ತಿರುವುದು ಅತ್ಯಂತ ಅನೈತಿಕವಾಗಿದೆ” ಎಂದು ರಾಜಕಾರಣಿಗಳ ಇಬ್ಬಗೆ ನೀತಿಯನ್ನು ಟೀಕಿಸಿದ್ದಾರೆ ಕವಿರಾಜ್.
”ನಿಮ್ಮ ಅವಾಂತರ , ಅವಿವೇಕತನ, ಅಸಮರ್ಥತೆಗಳಿಗೆ ಜನರನ್ನು ಹೊಣೆಗಾರರಾಗಿಸಿ ಇನ್ನಷ್ಟು ಸಂಕಷ್ಟಕ್ಕೆ ದೂಡಬೇಡಿ. ಪರಿಣಾಮಕಾರಿ ಮುನ್ನೆಚ್ಚರಿಕೆ , ನಿಯಂತ್ರಣ ಕ್ರಮಗಳನ್ನು ಬಿಗಿಯಾಗಿ ಜಾರಿಗೊಳಿಸಿ ಸಾಧ್ಯವಾದಷ್ಟು ಸಹಜ ಜನಜೀವನಕ್ಕೆ ಅನುವು ಮಾಡಿಕೊಡಿ. ತೀರಾ ಕಡಿಮೆ ಜನ ಓಡಾಡುವ ನೈಟ್ ಹೊತ್ತಲ್ಲಿ ಕರ್ಫ್ಯೂ , ಒಂದು ಸೀಟ್ ಗ್ಯಾಪ್ ಬಿಟ್ಟು ಕುಳಿತ ಕೂಡಲೇ ಕರೊನಾ ಬರುವುದಿಲ್ಲವೇನೋ ಎನ್ನುವಂತಿರುವ 50:50 ರೂಲ್ಸ್ ಗಳೆಲ್ಲ ಒಂದು ರೀತಿ ಹಾಸ್ಯಾಸ್ಪದ ರೂಲ್ಸ್ ಗಳೇ . ಅದರ ಬದಲು ಎಲ್ಲರೂ ವ್ಯಾಕ್ಸಿನ್ ಹಾಕಿಸುವ ವ್ಯವಸ್ಥೆ ಆಗಲಿ . ಜೊತೆಗೆ ಮಾಸ್ಕ್ , ಸಾಮಾಜಿಕ ಅಂತರ , ಎಲ್ಲಿಗೆ ಆಗಲಿ ಪ್ರವೇಶಕ್ಕೆ ಮುನ್ನ ಸ್ಯಾನಿಟೈಸೇಷನ್ ಕಡ್ಡಾಯವಾಗಲಿ. ಲಾಕ್ ಡೌನ್ ಕೊನೆಯ ಆಯ್ಕೆಯಾಗಿರಲಿ” ಎಂದು ಸಲಹೆ ನೀಡಿದ್ದಾರೆ