ಮತ್ತೆ ಯೂರಿಯಾ ಕೃತಕ ಅಭಾವ?: ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಎನ್ನುತ್ತಿರುವ ಕೆಲ ಮಾರಾಟಗಾರರು

ಬೆಂಗಳೂರು:ಆ-1:ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ!

2008ರ ಮೇ 30ರಂದು ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿ ಯೂರಿಯಾ ಅಭಾವ ಸೃಷ್ಟಿಯಾಗಿತ್ತು. ಜೂ.10ರಂದು ಗೋಲಿಬಾರ್ ನಡೆದು ಇಬ್ಬರು ರೈತರು ಬಲಿಯಾಗಿದ್ದರು. ಇದೀಗ ಮತ್ತೆ ಬಿಎಸ್​ವೈ ಮುಖ್ಯಮಂತ್ರಿಯಾಗುತ್ತಿದ್ದಂತೆ ಯೂರಿಯಾ ಅಭಾವ ಎದುರಾಗಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 44,580 ಟನ್ ಯೂರಿಯಾಕ್ಕೆ ಬೇಡಿಕೆ ಇತ್ತು. ಅದರಲ್ಲಿ 6,419 ಟನ್ ಜೂನ್ ಅಂತ್ಯದವರೆಗೆ ಪೂರೈಕೆಯಾಗಿತ್ತು. ಸಕಾಲಕ್ಕೆ ಮಳೆಯಾಗದ್ದರಿಂದ ಜೂನ್ ಅಂತ್ಯಕ್ಕೆ 8,206 ಟನ್ ಸ್ಟಾಕ್ ಉಳಿದಿತ್ತು. ಹೀಗಾಗಿ ಅಧಿಕಾರಿಗಳು ಯೂರಿಯಾ ಗೊಬ್ಬರದ ಅಭಾವ ವಿಲ್ಲವೆಂದು ಸುಮ್ಮನಾಗಿದ್ದರು. ಆದರೆ, ಜುಲೈನಲ್ಲಿ ಹದಭರಿತ ಮಳೆಯಾದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಇದನ್ನು ಅರಿತ ಕೆಲ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿದ್ದರಿಂದ ಯೂರಿಯಾ ಗೊಬ್ಬರದ ಅಭಾವ ಜಿಲ್ಲೆಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಅಭಾವದ ಬಗ್ಗೆ ವರದಿಯಾಗಿಲ್ಲ.

ಉತ್ಪಾದನೆ ಕಡಿಮೆ: ಯೂರಿಯಾ ಗೊಬ್ಬರ ಉತ್ಪಾದಿಸುವ ಕಂಪನಿಗಳು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅವಶ್ಯಕ ಬೇಡಿಕೆ ಇರು ವಷ್ಟು ಗೊಬ್ಬರ ಪೂರೈಸುತ್ತವೆ. ಆದರೆ, ಈ ವರ್ಷ ಉತ್ಪಾದನೆ ಕಡಿಮೆಯಾಗಿದೆ. ಡಿಎಪಿ ಮತ್ತು ಮತ್ತು ಯೂರಿಯಾ ಎರಡನ್ನು ಖರೀದಿಸಬೇಕು ಎಂದು ರಸಗೊಬ್ಬರ ಕಂಪನಿಗಳ ಅಲಿಖಿತ ನಿಯಮವಿದೆ. ಆದರೆ ಸರ್ಕಾರ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಘೊಷಿಸಿದ್ದರಿಂದ ಗೊಬ್ಬರ ಅಭಾವ ಉಂಟಾಗಿದೆ.

ರಸಗೊಬ್ಬರ ಕೊರತೆ ಇಲ್ಲ: ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅಗತ್ಯ ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಅಬೀಬ ತಿಳಿಸಿದ್ದಾರೆ. ಜಿಲ್ಲೆ ಯಲ್ಲಿ 2019ರ ಮುಂಗಾರು ಹಂಗಾಮಿಗೆ ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಸೇರಿ 77,214 ಟನ್ ರಸಗೊಬ್ಬರದ ಬೇಡಿಕೆ ಇತ್ತು. ಈ ಪೈಕಿ 66,900 ಟನ್ ಗೊಬ್ಬರ ಪೂರೈಕೆಯಾಗಿದೆ. ಅದರಲ್ಲಿ 23,608 ಟನ್ ಮಾರಾಟವಾಗಿದ್ದು, ಇನ್ನೂ 43,292 ಟನ್ ಗೊಬ್ಬರ ದಾಸ್ತಾನಿದೆ ಎಂದು ಅಬೀಬ ತಿಳಿಸಿದ್ದಾರೆ.

ಕೃತಕ ಅಭಾವ…?

50 ಕೆಜಿಯ 2 ಚೀಲ ಯೂರಿಯಾ ಗೊಬ್ಬರ ಖರೀದಿಸಿದರೆ ಅದಕ್ಕೆ ಪರ್ಯಾಯವಾಗಿ ಬೇರೆ ಬೇರೆ ಕಂಪನಿಯ 1 ಚೀಲ ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರ ಖರೀದಿಸಬೇಕು. ಇಲ್ಲವಾದರೆ ಅಂಥ ಅಂಗಡಿಗಳಿಗೆ ಯೂರಿಯಾ ಕೊಡುವುದಿಲ್ಲ ಎಂದು ಕೆಲ ಕಂಪನಿಗಳು ಹೇಳುತ್ತಿವೆ. ಯೂರಿಯಾ ಗೊಬ್ಬರದ ಬೆಲೆ 1 ಚೀಲಕ್ಕೆ 296ರಿಂದ 300 ರೂ.ಗಳಷ್ಟಿದೆ. ಬೇರೆ ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರದ ಬೆಲೆ 1,200 ರೂ.ಗಳಿಂದ 1,500 ರೂ.ವರೆಗಿದೆ. ಕೆಲ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಬಹಳಷ್ಟಿದ್ದರೂ ಬೇರೆ ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಕೊಡುತ್ತೇವೆ ಎನ್ನುವ ಷರತ್ತು ವಿಧಿಸುತ್ತಿದ್ದಾರೆ.

ಹಾವೇರಿಯ ಕರ್ನಾಟಕ ರಾಜ್ಯ ಮಾರುಕಟ್ಟೆ ಫೆಡರೇಷನ್​ನಲ್ಲಿ 900 ಟನ್ ಯೂರಿಯಾ ಗೊಬ್ಬರ ಸ್ಟಾಕ್ ಇದೆ. ಬೇಕಾದವರು ಈಗಲೇ ಒಯ್ಯಬಹುದು. ಅಲ್ಲದೆ ಬೇರೆಡೆಯಿಂದ ಸಾವಿರಾರು ಟನ್ ಯೂರಿಯಾ ಬರಲಿವೆ. ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬಾರದು. ಕೃತಕ ಅಭಾವ ಸೃಷ್ಟಿ ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.

| ಬಿ. ಮಂಜುನಾಥ ಜಂಟಿ ಕೃಷಿ ನಿರ್ದೇಶಕರು ಹಾವೇರಿ

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಯೂರಿಯಾ ಗೊಬ್ಬರದ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಕ್ಕಪಕ್ಕದ ಜಿಲ್ಲೆಗಳಲ್ಲಿರುವ ದಾಸ್ತಾನನ್ನು ತರಿಸಿ ಜಿಲ್ಲೆಯ ರೈತರಿಗೆ ಪೂರೈಸಲು ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಯಾಗಿದ್ದರೆ ಕೂಡಲೆ ಕಠಿಣ ಕ್ರಮ ಕೈಗೊಳ್ಳಬೇಕು.

| ಬಸವರಾಜ ಬೊಮ್ಮಾಯಿ ಶಾಸಕರು ಶಿಗ್ಗಾಂವಿ

ಕೃಪೆ:ವಿಜಯವಾಣಿ

ಮತ್ತೆ ಯೂರಿಯಾ ಕೃತಕ ಅಭಾವ?: ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಎನ್ನುತ್ತಿರುವ ಕೆಲ ಮಾರಾಟಗಾರರು

urea-farmer-agriculture-lack-fertilisers