ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಸಾಧಿಸಬೇಕಾದ ಮತ್ತಷ್ಟು ಸ್ವಾಯತ್ತತೆ, ಗಳಿಸಿಕೊಳ್ಳಬೇಕಾದ ಆರ್ಥಿಕ ಸ್ವಾವಲಂಬನೆ ಮತ್ತು ನೇಮಕಾತಿಯಲ್ಲಿ ಕಾಯ್ದುಕೊಳ್ಳಬೇಕಾದ ಪಾರದರ್ಶಕತೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಂಗಳವಾರ ಇಲ್ಲಿ ಹಲವು ವಿ.ವಿ.ಗಳ ಕುಲಪತಿಗಳು ಮತ್ತು ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಿದರು.
ಎನ್ಇಪಿ ಮಾನದಂಡಗಳಿಗೆ ಅನುಸಾರವಾಗಿ ವಿ.ವಿ.ಗಳಲ್ಲಿ ಆಗಬೇಕಾದ ಸುಧಾರಣೆ ಮತ್ತು ನೇಮಕಾತಿ ವಿಧಿವಿಧಾನ ಕುರಿತು ಸರಕಾರ ರಚಿಸಿರುವ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪಾಶ್ಚಾತ್ಯ ದೇಶಗಳ ವಿ.ವಿ.ಗಳಲ್ಲಿರುವ ಬೋಧನಾ ವ್ಯವಸ್ಥೆ, ಸಿಬ್ಬಂದಿ ಬಲ, ಕೋರ್ಸುಗಳ ಸ್ವರೂಪ, ಸರಕಾರ ಕೊಡಬೇಕಾದ ಅನುದಾನದ ಪ್ರಮಾಣ ಎಷ್ಟಿರಬೇಕು ಎನ್ನುವಂತಹ ಮಹತ್ತ್ವದ ವಿಚಾರಗಳನ್ನು ಕುರಿತು ಚರ್ಚಿಸಿದರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರು ಮತ್ತು ಹಲವು ಕುಲಪತಿಗಳೊಂದಿಗೆ ಸಂವಾದ ನಡೆಸಿದ ಸಚಿವರು, `ವಿಶ್ವವಿದ್ಯಾಲಯಗಳು ಸ್ವಾವಲಂಬಿ ಸಂಸ್ಥೆಗಳಾಗಿ ಬೆಳೆಯಬೇಕಾದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ನೀಡಿರುವ ಕೆಲವು ಸಲಹೆ ಮತ್ತು ಶಿಫಾರಸುಗಳು ಅರ್ಥಪೂರ್ಣವಾಗಿವೆ. ಈ ನಿಟ್ಟಿನಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕಾಗಿದ್ದು, ಮುಂದಿನ ಸಭೆಯೊಳಗೆ ಇದಕ್ಕೆ ಅಂತಿಮ ರೂಪುರೇಷೆ ನೀಡಬೇಕು’ ಎಂದು ಸೂಚಿಸಿದರು.
ವಿ.ವಿ.ಗಳಲ್ಲಿ ಸ್ವಾಯತತ್ತೆ ಮತ್ತು ಸ್ವಾವಲಂಬನೆ ಎರಡೂ ಬರಬೇಕು. ಆದ್ದರಿಂದ ಕನಿಷ್ಠ ಮೂರನೇ ಒಂದು ಭಾಗದಷ್ಟು ಆರ್ಥಿಕ ಖರ್ಚುವೆಚ್ಚಗಳನ್ನಾದರೂ ಈ ಸಂಸ್ಥೆಗಳು ಉದ್ದಿಮೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ತಾವೇ ಭರಿಸುವಂತಾಗಬೇಕು ಎನ್ನುವ ಸಲಹೆಯನ್ನು ಅವರು ನೀಡಿದರು.
`ಪಾಶ್ಚಾತ್ಯ ವಿ.ವಿ.ಗಳಲ್ಲಿ ನಮ್ಮಲ್ಲಿರುವಷ್ಟು ಬೋಧನಾ ಸಿಬ್ಬಂದಿಯೇ ಇಲ್ಲ. ನಮ್ಮಲ್ಲಿರುವ ಬೋಧನಾ ಕ್ರಮಕ್ಕೆ ಈಗಿರುವ ಬೋಧಕ ವರ್ಗದಲ್ಲಿ ಮೂರನೇ ಎರಡರಷ್ಟು ಮಂದಿಯೇ ಸಾಕು. ಉಳಿದ ಇನ್ನೊಂದು ಭಾಗದ ಕಾರ್ಯಭಾರವನ್ನು ಸಂಶೋಧನಾ ವಿದ್ಯಾರ್ಥಿಗಳ ನೆರವಿನಿಂದ ಪೂರೈಸಬಹುದು. ಇದರ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕಾ ವಲಯದ ವಿಷಯತಜ್ಞರನ್ನು ಸಂದರ್ಶಕ ಮತ್ತು ಗೌರವ ಬೋಧಕರನ್ನಾಗಿ ಪರಿಗಣಿಸಿ, ಅವರ ಸೇವೆಯನ್ನು ಪಡೆಯುವ ವ್ಯವಸ್ಥೆಯನ್ನು ತರುವ ಸಾಧ್ಯತೆಗಳ ಬಗ್ಗೆ ಯೋಚಿಸಬಹುದು ಎಂದು ಅವರು ಹೇಳಿದರು.
ಎನ್ಇಪಿ ಪ್ರಕಾರ ವಿಶ್ವವಿದ್ಯಾಲಯಗಳು ಬೋಧನಾ ಸಿಬ್ಬಂದಿಯ ನೇಮಕಾತಿ ವಿಧಾನವನ್ನು ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕಿದೆ; ಇದರ ಜತೆಯಲ್ಲೇ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಹಾಗೂ ಸಂಶೋಧನೆಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಸಚಿವರು ಗಮನ ಸೆಳೆದರು.
ಈಗಿರುವ ವಿ.ವಿ.ಗಳಲ್ಲಿ ಸರಕಾರದ ಅನುದಾನವು ಪೋಲಾಗುತ್ತಿದೆ. ವಿ.ವಿ.ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಪಾಲುದಾರಿಕೆ ಮಾದರಿಯಲ್ಲಿ (ಪಿಪಿಪಿ) ನಿರ್ವಹಣೆ ಮಾಡುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಉದ್ದಿಮೆಗಳ ಸಿಎಸ್ಆರ್ ನಿಧಿ ಮತ್ತು ಹಿರಿಯ ವಿದ್ಯಾರ್ಥಿ ಸಂಘಗಳ ಮೂಲಕ ವಿ.ವಿ.ಗಳನ್ನು ಅಭಿವೃದ್ಧಿ ಪಡಿಸಬೇಕು. ಸಹಾಯಕರ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಿ, ಮೆರಿಟ್ ಆಧಾರದ ಮೇಲೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ನುಡಿದರು.
ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತಕುಮಾರ್, ಶ್ರೀ ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು ಆಲೂರು, ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ರಾಮಚಂದ್ರಗೌಡ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿದ್ದರು.