ಬೆಂಗಳೂರು, ಜ.19, 2022 : (www.justkannada.in news ) : ರಾಜ್ಯ ಸರಕಾರ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನೂರು ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ (Karnataka Sanskrit University) ಹಲವಾರು ವಿವಾದಗಳಿಗೆ ನಾಂದಿಯಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ವಿವಿ ಸ್ಥಾಪನೆ ಸಂಬಂಧ ಶಂಕುಸ್ಥಾಪನೆ ನೆರವೇರಿಸಿದ ನಂತರ ವಿವಾದ ತೀವ್ರತೆ ಪಡೆದುಕೊಂಡಿದ್ದು, ಸಂಸ್ಕೃತ ವಿವಿ ಸ್ಥಾಪನೆಗೆ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ.
ಈ ನಡುವೆ ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೆ ವೆಚ್ಚವಾಗುವ ಸಂಪೂರ್ಣ ಹಣವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವೇ ಭರಿಸುತ್ತಿರುವುದು ವಿಶೇಷ. ಬಹುಶಃ, ರಾಜ್ಯದ ಶೈಕ್ಷಣಿಕ ಕ್ಷೇತ್ರದ ಇತಿಹಾಸದಲ್ಲಿ ಒಂದು ವಿಶ್ವವಿದ್ಯಾನಿಲಯ ಮತ್ತೊಂದು ವಿಶ್ವವಿದ್ಯಾನಿಲಯಕ್ಕೆ ಈ ರೀತಿ ಕಟ್ಟಡ ನಿರ್ಮಿಸುತ್ತಿರುವುದು ಇದೇ ಮೊದಲು. ಈ ಸಂಬಂಧ ಕರ್ನಾಟಕ ರಾಜ್ಯ ಮುಕ್ತ ವಿವಿಯ ವ್ಯವಸ್ಥಾಪನ ಮಂಡಳೀ ಸಭೆಯಲ್ಲಿ ನಿರ್ಣಯವನ್ನು ಸಹ ಕೈಗೊಳ್ಳಲಾಗಿದೆ. ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂ. ನಿಗಧಿ ಪಡಿಸಿ ಅನುಮೋದನೆ ಸಹ ಪಡೆಯಲಾಗಿದೆ.
ಈಗ ಸಮಸ್ಯೆ ಇರೋದೆ ಇಲ್ಲಿ :
ದಶಕಗಳ ಇತಿಹಾಸವಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಹೊಸ ಸ್ವರೂಪ, ಹೈಟೆಕ್ ಸ್ಪರ್ಶ ನೀಡಿ ಮೇಲ್ದರ್ಜೆಗೇರಿಸಿದ್ದು ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿಯಾಗಿದ್ದ ವೇಳೆಯಲ್ಲಿ. ಜತೆಗೆ ನೂತನ ಕೋರ್ಸ್ ಗಳನ್ನು ಆರಂಭ, ವಿವಿಧ ಸಂಸ್ಥೆಗಳ ಜತೆಗೆ ಒಡಂಬಡಿಕೆಗಳ ಮೂಲಕ ಕರ್ನಾಟಕ ಮುಕ್ತ ವಿವಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೂಡಿಕರಿಸುವಲ್ಲಿ ಯಶಸ್ವಿಯಾದರು.
ಆದರೆ ಪ್ರೊ.ರಂಗಪ್ಪ ಅವರ ಅವಧಿಯಲ್ಲಿ ನಿಯಮ ಬಾಹಿರವಾಗಿ ಕೋರ್ಸ್ ಗಳನ್ನು ತೆರೆಯಲಾಗಿದೆ ಎಂದು ಆರೋಪಿಸಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಸಹ ನಡೆಸಲಾಯಿತು.
ಆದರೆ ಆನಂತರದ ಬೆಳವಣಿಗೆಯಲ್ಲಿ ಮುಕ್ತವಿವಿ ಮಾನ್ಯತೆ ಕಳೆದುಕೊಂಡು ಸಂಕಷ್ಟಕ್ಕೆ ಈಡಾಯಿತು. ಪರಿಣಾಮ ವಿದ್ಯಾರ್ಥಿಗಳ ಪ್ರವೇಶಾತಿಯೂ ಸ್ಥಗಿತಗೊಂಡಿತು. ಆಗ, ಮುಕ್ತ ವಿವಿ ಸಿಬ್ಬಂದಿಗಳ ಸಂಬಂಧ ಮತ್ತು ಖರ್ಚು, ವೆಚ್ಚಕ್ಕೆ ಕೈ ಹಿಡಿದದ್ದು ಇದೇ ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ ಕ್ರೂಢೀಕರಿಸಿದ ಸಂಪನ್ಮೂಲ.
ಬಳಿಕ ಮುಕ್ತ ವಿವಿ ಕುಲಪತಿಯಾದ ಪ್ರೊ.ಶಿವಲಿಂಗಯ್ಯ ಅವರ ಶ್ರಮದ ಪರಿಣಾಮ ಮುಕ್ತವಿವಿಗೆ ಮಾನ್ಯತೆ ಲಭಿಸಿ ಮರು ಜೀವ ಲಭಿಸಿತು. ಆದರೆ, ಇದೀಗ ನಿರೀಕ್ಷಿತ ಪ್ರಮಾಣದಲ್ಲಿ KSOU ಗೆ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯುತ್ತಿಲ್ಲ.
ಪ್ರೊ.ರಂಗಪ್ಪ ಅವರ ಅವಧಿಯಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಜತೆಗೆ ವಿವಿ ಕಾಯ್ದೆ, ನಿಯಮ ಹಾಗೂ ಸ್ಟ್ಯಾಚೂಟ್ ಗಳ ಪ್ರಕಾರವೇ ಹೊಸ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂಬುದು ಸಾಬೀತಾಯಿತು. ಪರಿಣಾಮ ಅಪಪ್ರಚಾರ ಬಂದ್ ಆಯಿತು.
ಇದೀಗ ವಿಪರ್ಯಾಸ ಎಂಬಂತೆ, ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ ಕ್ರೂಢೀಕರಿಸಿದ ಆರ್ಥಿಕ ಸಂಪನ್ಮೂಲದಲ್ಲೇ (ಅಂದಾಜು 650 ಕೋಟಿ ರೂ. ) ಮುಕ್ತ ವಿವಿಯ ಕಾರ್ಯಚಟುವಟಿಕೆ ಕಳೆದ ಕೆಲ ವರ್ಷಗಳಿಂದ ನಿರ್ವಹಿಸುತ್ತಿರುವುದು. ಈಗಾಗಲೇ ಈ ಮೊತ್ತದ ಶೇಕಡ 50 ರಷ್ಟು ಹಣ ವ್ಯಯಿಸಲಾಗಿದ್ದು, ಇದಕ್ಕೆ ಹೊಲಿಸಿದಲ್ಲಿ ಸಂಗ್ರಹ ಶೂನ್ಯವೆಂದೇ ಹೇಳಬಹುದು. ಜತೆಗೆ ಇದೀಗ, ಕರ್ನಾಟಕ ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೂ ಇದೇ ಹಣವನ್ನು (ವಿದ್ಯಾರ್ಥಿಗಳ ಶುಲ್ಕ ) ಕಾನೂನು ಬಾಹಿರವಾಗಿ ಬಳಕೆ ಮಾಡಲಾಗುತ್ತಿದೆ. ಒಂದು ವಿವಿಯಲ್ಲಿ ಸಂಗ್ರಹಗೊಂಡ ಹಣವನ್ನು ಮತ್ತೊಂದು ವಿವಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿಲ್ಲ. ಸಚಿವ ಸಂಪುಟದಲ್ಲೂ ಈ ಬಗ್ಗೆ ಚರ್ಚಿಸಿ ಅನುಮತಿ ಪಡೆದುಕೊಂಡಿಲ್ಲ.
ಒಂದು ಕಡೆ ನಿಯಮ ಬಾಹಿರವಾಗಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂಬ ಆರೋಪ, ತನಿಖೆ. ಮತ್ತೊಂದೆಡೆ ಈ ರೀತಿ ಕೆಲಸಗಳಿಂದಲೇ ಕ್ರೂಢೀಕರಿಸಿದ ಸಂಪನ್ಮೂಲದ ಸಹಾಯದಿಂದಲೇ ಸಂಸ್ಕೃತ ವಿವಿಗೆ ಕಟ್ಟಡ ನಿರ್ಮಾಣಕ್ಕೆ ಸರಕಾರ ಸಹಕಾರ ನೀಡುತ್ತಿರುವುದು ಎಷ್ಟು ಸರಿ..?
key words : Mysore-KSOU-founding-Sanskrit-university-building-illegal