‘ದಕ್ಷಿಣ ಕಾಶಿ’ಯಲ್ಲಿ ಇಂದು ಬೆಳಗ್ಗೆ ಕೊರೆವ ಚಳಿಯಲ್ಲೇ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು.!

Mysore-nanjanagudu-demolition-drive-police

 

ಮೈಸೂರು, ಜ.23, 2022 : (www.justkannada.in news) ನಂಜನಗೂಡು ಪಟ್ಟಣದಲ್ಲಿ ಇಂದು ಬೆಳಗ್ಗೆ ಕೊರೆವ ಚಳಿಯಲ್ಲೂ ಕಾರ್ಯಚರಣೆಗಿಳಿದ ಅಧಿಕಾರಿಗಳು. ಜೆಸಿಬಿ ಮೂಲಕ ಸಿಟಿಜನ್ ಶಾಲೆ ಹಿಂಬದಿಯ ವಿವಾದಿತ ರಸ್ತೆ ಒತ್ತುವರಿ ತೆರವು.

ಪಟ್ಟಣದ ಈ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಸರ್ಕಾರಿ ಜಾಗದ ಒತ್ತುವರಿ ಮಾಡಲಾಗಿತ್ತು. ಇದರಿಂದಾಗಿ ಸಿಟಿಜನ್ ಶಾಲೆಯ ಹಿಂಬದಿಯ ರಸ್ತೆ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು . ಇಂದು ಬೆಳಿಗ್ಗೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ತಹಸೀಲ್ದಾರ್ ಶಿವಮೂರ್ತಿ, ಆಯುಕ್ತ ರಾಜಣ್ಣ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ತೆರವು ಕಾರ್ಯಾಚರಣೆ ನಡೆಸಿತು.

ಸಿಟಿಜನ್ ಶಾಲೆಯ ಹಿಂಭಾಗದ ಬಡಾವಣೆಯ ವಾಸಿಗಳು ಮತ್ತು ಪ್ರಗತಿಪರ ಸಂಘಟಕರು ರಸ್ತೆ ಅಭಿವೃದ್ಧಿಗಾಗಿ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಕ್ರಮ ಒತ್ತುವರಿದಾರರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಕೂಡ ಮಾಡಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ಮತ್ತು ತಹಸೀಲ್ದಾರ್ ರವರು ಸಿಬ್ಬಂದಿಗಳ ಜೊತೆಗೂಡಿ ತೆರವು ಕಾರ್ಯಾಚರಣೆ ಕೈಗೊಂಡರು. ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ 60 ಅಡಿಗಳ ರಸ್ತೆ ಕಾಮಗಾರಿಗೆ ಸಕಲ ಸಿದ್ಧತೆ ನಡೆಸಲಾಗಿದೆ.


ಕಂದಾಯ ಇಲಾಖೆಯ ನಕ್ಷೆಯಲ್ಲಿ 60 ಅಡಿ ಎಂದು ನಮೂದಾಗಿತ್ತು ಆದರೆ ನಗರಸಭೆ ಅಧಿಕಾರಿಗಳು 40 ಅಡಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದರು. ಇದನ್ನು ಮನಗಂಡ ಪ್ರಗತಿಪರರು ಮತ್ತು ಬಡಾವಣೆ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.

key words : Mysore-nanjanagudu-demolition-drive-police