ರಾಮನಗರ,ಜನವರಿ,26,2022(www.justkannada.in): ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಇಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜುಗಳ ಕ್ಯಾಂಪಸ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ರಾಮನಗರವನ್ನು ‘ಹೆಲ್ತ್ ಸಿಟಿ’ಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿದ ಅವರು, ಜಿಲ್ಲೆಯಲ್ಲಿ ಕೇವಲ 250 ಹಾಸಿಗೆಗಳನ್ನು ಹೊಂದಿದ್ದ ಜಿಲ್ಲಾಸ್ಪತ್ರೆಯ ಸಾಮರ್ಥ್ಯವನ್ನು 650 ಹಾಸಿಗೆಗಳಿಗೆ ಏರಿಸಲಾಗಿದ್ದು, ಇಲ್ಲಿಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ರೈತರ ಸಬಲೀಕರಣಕ್ಕೆ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಗೆ 179 ಕೋಟಿ ರೂ. ನೆರವು ರೈತರ ಬ್ಯಾಂಕ್ ಖಾತೆಗಳಿಗೆ ಹರಿದು ಬಂದಿದೆ. ಇದರಿಂದ 1.18 ಲಕ್ಷ ರೈತ ಕುಟುಂಬಗಳಿಗೆ ಲಾಭವಾಗಿದೆ. ಇದರ ಜೊತೆಗೆ ರಾಜ್ಯ ಸರಕಾರವು 63 ಕೋಟಿ ರೂ. ಕೊಟ್ಟಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯ ರೈತರಿಗೆ 18 ಕೋಟಿ ರೂ. ವಿನಿಯೋಗಿಸಿ ಕೃಷಿ ಉಪಕರಣಗಳನ್ನು ಕೊಡಲಾಗಿದೆ. ಹಾಗೆಯೇ, ರೇಷ್ಮೆ ಬೆಳೆಗಾರರಿಗೆ 25 ಕೋಟಿ ರೂ. ನೇರ ಅನುದಾನ ಒದಗಿಸಲಾಗಿದೆ. ಜತೆಗೆ ಮುಂದಿನ ಸಂಪುಟ ಸಭೆಯಲ್ಲಿ ಚನ್ನಪಟ್ಟಣದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ರೇಷ್ಮೆ ಮಾರುಕಟ್ಟೆ ನಿರ್ಮಿಸುವ ಯೋಜನೆಗೆ ಅನುಮೋದನೆ ದೊರಕಿಸಿ ಕೊಡಲಾಗುವುದು. ಜತೆಗೆ, ಭೈರಾಪಟ್ಟಣದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗುವುದು ಎಂದು ಅವರು ಜಿಲ್ಲೆಯ ಜನರಿಗೆ ಸಿಹಿಸುದ್ದಿ ಕೊಟ್ಟರು.
ಜಿಲ್ಲೆಯಲ್ಲಿ `ಜಲ ಜೀವನ್’ ಮಿಷನ್ ಯೋಜನೆಯನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನೂ ಬಾಕಿ ಉಳಿದಿರುವ ಮನೆಗಳಿಗೆ ಈ ವರ್ಷದ ಡಿಸೆಂಬರ್ ಹೊತ್ತಿಗೆ ಹೊಸದಾಗಿ ನಲ್ಲಿ ಸಂಪರ್ಕ ಕೊಟ್ಟು, ನದಿಮೂಲದ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದು. ಇದರಿಂದ ಜನರ ಆರೋಗ್ಯ ಸುಧಾರಿಸಲಿದೆ ಎಂದು ಅಶ್ವತ್ಥನಾರಾಯಣ್ ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಪಂ ಸಿಇಒ ಇಕ್ರಂ, ಎಸ್ಪಿ ಸಂತೋಷ ಕುಮಾರ್ ಉಪಸ್ಥಿತರಿದ್ದರು.
Key words: Minister -Ashwath Narayan-Ramanagar