ಮೈಸೂರು, ಫೆ.04, 2022 : (www.justkannada.in news ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್, ರಾಜ್ಯಪಾಲರ ಅದೇಶವನ್ನೇ ಗಾಳಿಗೆ ತೂರಿ ಅಕ್ರಮ ನೇಮಕಾತಿ ಮಾಡುತ್ತಿದ್ದು, ಕುಲಪತಿ ಸೇರಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಅಮಾನತು ಮಾಡಿ ಎಂದು ಒತ್ತಾಯಿಸಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ.ಮಹದೇವ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು..
ವಿವಿಯಲ್ಲಿ ನಡೆಯಬಾರದ್ದು ನಡೆಯುತ್ತಿದೆ. ಅದು ವಿವಿಯೋ, ಮನೆಯ ವ್ಯವಹಾರವೋ ಅರ್ಥವಾಗುತ್ತಿಲ್ಲ. ಕುಲಪತಿ ತಮ್ಮ ಕೊನೆಯ ೬ ತಿಂಗಳ ಸೇವಾವಧಿಯಲ್ಲಿ ಯಾವುದೇ ನೇಮಕ ಮಾಡುವಂತಿಲ್ಲ ಎಂದು ರಾಜ್ಯಪಾಲರ ಆದೇಶವಿದೆ. ಆದರೆ, ವಿದ್ಯಾಶಂಕರ್ ಈ ಆದೇಶವನ್ನೇ ಗಾಳಿಗೆ ತೂರಿ ಅಕ್ರಮವಾಗಿ ಲಕ್ಷಾಂತರ ರೂ ಹಣ ಪಡೆದು ನೇಮಕ ಮಾಡುತ್ತಿದ್ದಾರೆ. ಅವರಿಗೆ ನೇಮಕಾತಿ ಆದೇಶ ನೀಡದಿದ್ದರೂ ಸಂಬಳ ಕೊಡುತ್ತಿದ್ದಾರೆ.
ಜತೆಗೆ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ . ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವರು ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಸರ್ಕಾರ ಕೂಡಲೇ ಈ ಎಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಅಮಾನತ್ತು ಮಾಡಬೇಕು.
ಜಿಲ್ಲೆಯವರೇ ಆದ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಗಮನಹರಿಸಿ ಅಕ್ರಮ ತಡೆಗೆ ಮುಂದಾಗಬೇಕು. ಸದನದಲ್ಲಿ ಚರ್ಚಿಸಬೇಕು ಎಂದು ಮನವಿ ಮಾಡಿದರು.
ಡೈರಿ ನೇಮಕಾತಿಯಲ್ಲಿ ಅಕ್ರಮ:
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಂಘದ ವಿವಿಧ ನೇಮಕಾತಿಯಲ್ಲಿ ಅಕ್ರಮವಾಗಿದೆ. ಪರೀಕ್ಷೆ ಜವಾಬ್ದಾರಿ ಹೊತ್ತಿದ್ದ ವಿದ್ಯಾಶಂಕರ್ ಅರ್ಹರನ್ನು ಆಯ್ಕೆ ಮಾಡದೆ ತಮಗೆ ಬೇಕಾದವರನ್ನು ನೇಮಕ ಮಾಡಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದ್ದು, ಸಿಐಡಿ ಅಥವಾ ಎಸ್ ಐಟಿ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಲಿಖಿತ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಡಾ.ಮಹಾದೇವ್ ಆಗ್ರಹಿಸಿದರು.
key words : mysore-KSOU-corruption