ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ್ದ ಮೈಸೂರಿನ ಎನ್ ಸಿಸಿ ಕೆಡಿಟ್ ಗಳನ್ನು ಸನ್ಮಾನಿಸಿದ ಕುಲಪತಿ ಪ್ರೊ. ಜಿ.ಹೇಮಂತ್ ‌ಕುಮಾರ್.

mysore-republic-day-ncc-vc-uom

 

ಮೈಸೂರು, ಫೆ.06, 2022 : (www.justkannada.in news ) ಇಲ್ಲಿನ ಡಿಸಿ ಕಚೇರಿ ಬಳಿ ಇರುವ ಎನ್ ಸಿಸಿ ವಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್‌ ಅವರು ದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಆರ್ ಡಿಸಿ ಪಥಸಂಚನದಲ್ಲಿ ಭಾಗವಹಿಸಿದ್ದ ಎನ್ ಸಿಸಿ ಕೆಡಿಟ್‌ ಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಈ ಬಾರಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ 19 ವಿದ್ಯಾರ್ಥಿಗಳು ಭಾಗವಹಿಸಿದ್ದರು.‌ ಇದು ನಿಜಕ್ಕೂ ಹೆಮ್ಮೆಯ ವಿಷಯ. ನಿಮ್ಮ ಅನುಭವದ ಮಾತುಗಳನ್ನು ಕೇಳಿ ಖುಷಿ ಆಯಿತು ಎಂದರು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 33 ಕೋಟಿ ಇದ್ದ ಜನಸಂಖ್ಯೆ ಇದೀಗ 134 ಕೋಟಿಗೆ ಬಂದಿದೆ. ಇದರಲ್ಲಿ ಶೇ. 40 ರಷ್ಟು ಯುವ ಶಕ್ತಿ ಇದೆ. ಈ ಯುವ ಸಮೂಹಕ್ಕೆ ಉತ್ತಮ ಶಿಕ್ಷಣ ಹಾಗೂ ನಾಯಕತ್ವ ಗುಣ, ಶಿಸ್ತು ಕಲಿಸಿದರೆ ದೇಶವು ಮತ್ತಷ್ಟು ಪ್ರಗತಿ ಹೊಂದಲು ಸಾಧ್ಯವಾಗಲಿದೆ.‌ ಜಗತ್ತಿನ ಇತರ ರಾಷ್ಟ್ರಗಳು ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿವೆ. ಭಾರತದ ಶಿಕ್ಷಣ ಬಗ್ಗೆ ಹಲವು ದೇಶಗಳು ಅಧ್ಯಯನ ನಡೆಸುತ್ತಿವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಎನ್ ಸಿಸಿ ಹಾಗೂ ಎನ್ಎಸ್ಎಸ್‌ನಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಹೊಸ ಹೊಳಪನ್ನು ನೀಡುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು ಎನ್ ಸಿಸಿ ಹಾಗೂ ಎನ್ ಎಸ್ ಎಸ್ ಗೆ ಸದಾ ಪ್ರೋತ್ಸಾಹ ನೀಡಿಕೊಂಡು ಬರುತ್ತಿದೆ. ವಿವಿಯಲ್ಲಿ 1.27 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 10 ಸಾವಿರ ವಿದ್ಯಾರ್ಥಿಗಳು ಎನ್ ಸಿಸಿ ಹಾಗೂ 17 ಸಾವಿರ ಮಂದಿ‌ ಎನ್ ಎಸ್ ಎಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕು ಎಂದರು.

ದೇಶದಲ್ಲಿ ಸಾಕಷ್ಟು ಯುವಕರು ಇರುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ. ಈ ದೇಶದಲ್ಲಿ ನಾವು ಯಾಕೆ ವಾಸಿಸುತ್ತಿದ್ದೇವೆ. ನಮ‌್ಮ ಪಾತ್ರ ಏನು? ಸಮಾಜಕ್ಕೆ ಏನು‌ ಕೊಡುಗೆ ನೀಡಬೇಕಿದೆ ಎಂಬ ಅಂಶವನ್ನು ಶಿಕ್ಷಕರು‌ ಮನವರಿಕೆ ಮಾಡಿಕೊಡಬೇಕಿದೆ. ಕಳೆದ 4 ತಿಂಗಳ ನಿರಂತರ ಅಭ್ಯಾಸ ಫಲವಾಗಿ ಎನ್ ಸಿಸಿ ಕೆಡಿಟ್ ಗಳು ದೆಹಲಿಯಲ್ಲಿ ಮೈಸೂರಿನ ಹೆಸರನ್ನು ರಾರಾಜಿಸುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಧುರಿ ತಾತಚಾರ್ಯ, ಡಾ.ಚಂದ್ರಶೇಖರ್, ಯಮುನಾ‌ ಶ್ರೀನಿಧಿ, ಕರ್ನಲ್ ಆರ್.ಆರ್. ಮೆನನ್, ಶ್ರೀರಂಗ ಸೇರಿದಂತೆ ಎನ್ ಸಿಸಿ ಅಧಿಕಾರಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

key words : mysore-republic-day-ncc-vc-uom