ಹೈದ್ರಾಬಾದ್, ಫೆಬ್ರವರಿ 7, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಹೈದರಾಬಾದ್ ನಲ್ಲಿ ರೂ.೧೩೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವಂತಹ ಶ್ರೀರಾಮಾನುಜಾಚಾರ್ಯರ ಬೃಹತ್ ಗಾತ್ರದ ‘ಸ್ಟ್ಯಾಚ್ಯೂ ಆಫ್ ಈಕ್ವಾಲಿಟಿ’ಯನ್ನು ಚೀನಾದಲ್ಲಿ ತಯಾರಿಸಲಾಗಿದೆ.
ಈ ಮೂರ್ತಿ ನಿರ್ಮಾಣಕ್ಕಾಗಿ ಒಂದೇ ಒಂದು ಭಾರತೀಯ ಕಂಪನಿಯೂ ಆಸಕ್ತಿ ತೋರಿಸಿತ್ತು. ಆದರೆ ಆಗಸ್ಟ್ ೨೦೧೫ರಂದು ಚೀನಾದ ಏರೋಸನ್ ಕಾರ್ಪೊರೇಷನ್ ಗೆ ಕಾಮಗಾರಿಯ ಗುತ್ತಿಗೆ ವಹಿಸಲಾಯಿತು.
ಮೂಲತಃ ನಿರ್ಮಾಣ ಕಾಮಗಾರಿಗಳು ಚೀನಾದಲ್ಲಿ ಕೈಗೊಂಡಿದ್ದು, ೧,೬೦೦ ಬಿಡಿ ಭಾಗಗಳ ರೂಪದಲ್ಲಿ ಮೂರ್ತಿಯನ್ನು ಭಾರತಕ್ಕೆ ತರಲಾಯಿತು. ೨೦೧೭-೧೮ರಲ್ಲಿ ಈ ಮೂರ್ತಿಯನ್ನು ಜೋಡಿಸುವ ಕಾರ್ಯ ಕೈಗೊಂಡಿದ್ದು, ೧೫ ತಿಂಗಳಲ್ಲಿ ಪೂರ್ತಿಗೊಳಿಸಲಾಯಿತು.
ಈ ೨೧೬ ಅಡಿ ಎತ್ತರದ ಬೃಹತ್ ಮೂರ್ತಿ, ಕುಳಿತಿರುವ ರೂಪದಲ್ಲಿರುವ ಜಗತ್ತಿನ ಎರಡನೇ ಅತೀ ಎತ್ತರದ ಮೂರ್ತಿಯಾಗಿದೆ. ಈ ಮೂರ್ತಿಯನ್ನು ಪಂಚಲೋಹಗಳು – ತಾಮ್ರ, ಬೆಳ್ಳಿ, ಚಿನ್ನ, ಜಿಂಕ್ ಮತ್ತು ಟೈಟಾನಿಯಂ ಗಳಿಂದ ತಯಾರಿಸಲಾಗಿದ್ದು, ತಾಮ್ರದ ಪ್ರಮಾಣ ಶೇ.೮೦ರಷ್ಟಿದೆ.
ಸುಮಾರು ೧೦೦೦ ವರ್ಷಗಳಷ್ಟು ಹಿಂದೆ, ಸಾಮಾಜಿಕ ಪರಿವರ್ತನೆಗಳು ಹಾಗೂ ಹಿಂದೂ ಧರ್ಮವನ್ನು ಪುನಃಶ್ಚೇತನಗೊಳಿಸಿರುವುದು ಹಾಗೂ ದೇಶದಾದ್ಯಂತ ಭಕ್ತಿಯ ಚಳವಳಿಗಳನ್ನು ಕೈಗೊಂಡಿರುವುದು ಶ್ರೀರಾಮಾನುಜಾಚಾರ್ಯರ ಕೊಡುಗೆಯಾಗಿದೆ.
ಶ್ರೀರಾಮಾನುಜಾಚಾರ್ಯರ ಮೂರ್ತಿ ಸ್ಥಾಪನೆಯಾಗಿರುವ ಹೈದರಾಬಾದ್ ನ ಸಮತಾ ಕೇಂದ್ರಂ, ಭಾರತದ ೧೦೮ ಪವಿತ್ರ ದೇವಾಲಯಗಳ ಪ್ರತಿಕೃತಿಗಳಿಂದ ಸುತ್ತುವರೆದಿದ್ದು, ಹೈದ್ರಾಬಾದ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ೪೫ ಎಕರೆ ವಿಶಾಲವಾದ ಪ್ರದೇಶದಲ್ಲಿ ಸ್ಥಾಪನೆಯಾಗಿದೆ. ಈ ಭೂಮಿಯನ್ನು ‘ಹೋಂ ಗ್ರೂಪ್’ನ ಉದ್ಯಮಿ ಜೂಪಲ್ಲಿ ರಾಮೇಶ್ವರ್ ರಾವ್ ಅವರು ದಾನ ನೀಡಿದ್ದು, ಯೋಜನೆಯ ಒಟ್ಟು ವೆಚ್ಚ ಅಂದಾಜು ರೂ.೧,೦೦೦ ಕೋಟಿ ಎನ್ನಲಾಗಿದೆ. ಇಡೀ ವೆಚ್ಚ ದಾನಗಳ ರೂಪದಲ್ಲಿಯೇ ಪಡೆದುಕೊಳ್ಳಲಾಗಿದೆ.
ಶ್ರೀ ರಾಮಾನುಜ ಸಹಸ್ರಾಬ್ದಿಯ ಆಯೋಜಕರ ಪರವಾಗಿ ಮೈ ಹೋಂ ಗ್ರೂಪ್ನ ಅಧ್ಯಕ್ಷ ಜೂಪಲ್ಲಿಯವರೇ ಚೀನಾದ ಸಂಸ್ಥೆಯೊಂದಿಗೆ ಈ ಕಾಮಗಾರಿಯ ಗುತ್ತಿಗೆಯ ಒಪ್ಪಂದವನ್ನು ಮಾಡಿಕೊಂಡಿದ್ದರು.
ಈ ಮೂರ್ತಿಯನ್ನು ಶ್ರೀರಾಮಾನುಜಾಚಾರ್ಯರ (ಈಗಿನ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ೧೦೧೭ರಲ್ಲಿ ಜನನ) ೧೦೦೦ನೇ ಜನ್ಮ ವಾರ್ಷಿಕೋತ್ಸವದ ಸ್ಮರಣೆಯಾಗಿ ನಿರ್ಮಿಸಲಾಗಿದೆ. ಮುಂದಿನ ೧,೦೦೦ ವರ್ಷಗಳವರೆಗೆ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಹರಡಲಿ ಎನ್ನುವುದು ಈ ಮೂರ್ತಿ ನಿರ್ಮಾಣ ಸ್ಥಾಪನೆಯ ಉದ್ದೇಶ ಹಾಗೂ ವಿಶ್ವಾಸವಾಗಿದೆ.
ಈ ಯೋಜನೆಯ ಪರಿಕಲ್ಪನೆಯ ರೂವಾರಿಗಳಾದ ಜನಪ್ರಿಯ ತ್ರಿದಂಡಿ ಚಿನ್ನ ಜೀಯಾರ್ ಸ್ವಾಮಿಗಳವರ ಪ್ರಕಾರ ಈ ಯೋಜನೆಯ ಪರಿಕಲ್ಪನೆ ಮೂಲತಃ ೧೦ ವರ್ಷಗಳಷ್ಟು ಹಳೆಯದಂತೆ. ಇದನ್ನು ತಮಿಳುನಾಡಿನ ಯಾವುದಾದರೂ ಸ್ಥಳದಲ್ಲಿ ಬೆಟ್ಟದ ಮೇಲೆ ನಿರ್ಮಾಣ ಮಾಡಬೇಕೆಂದಿತ್ತಂತೆ. ಆದರೆ ಎರಡು ವರ್ಷಗಳವರೆಗೂ ಹುಡುಕಾಡಿದರೂ ಅಲ್ಲಿ ಆ ರೀತಿಯ ಯಾವುದೇ ಸೂಕ್ತವಾದ ಸ್ಥಳ ಸಿಗಲಿಲ್ಲವಂತೆ. ಹಾಗಾಗಿ ಈ ಯೋಜನೆಗೆ ಮುಚಿಂತಲ್ ನಲ್ಲಿ ಜೂಪಲ್ಲಿಯವರು ಭೂಮಿಯನ್ನು ದಾನ ನೀಡಲು ಮುಂದಾದ ಕಾರಣದಿಂದಾಗಿ ಚಿನ್ನ ಜೀಯಾರ್ ಸ್ವಾಮಿಗಳವರು ಈ ಸ್ಥಳದಲ್ಲಿ ಯೋಜನೆಯನ್ನು ಅನುಮೋದಿಸಿದರು.
ಪ್ರಾಥಮಿಕವಾಗಿ ಆಗಮ ಮತ್ತು ಶಿಲ್ಪ ಶಾಸ್ತ್ರಗಳ ಪ್ರಕಾರ ಶ್ರೀರಾಮಾನುಜಾಚಾರ್ಯರ ೧೪ ಮಾದರಿಗಳನ್ನು ಸಿದ್ಧಪಡಿಸಿಕೊಳ್ಳಲಾಯಿತು. ಆ ಪೈಕಿ ಮೂರು ಮಾದರಿಗಳನ್ನು ಅಂತಿಮಗೊಳಿಸಿ, ೩ಡಿ ಸ್ಕ್ಯಾನ್ನಿಂಗ್ ಮೂಲಕ ಪರಿಶೀಲನೆ ನಡೆಸಿ, ಹೆಚ್ಚಿನ ಸುಧಾರಣೆಗಳನ್ನು ಮಾಡಲಾಯಿತು. ನಂತರದಲ್ಲಿ ಒಂದು ಮಾದರಿಯನ್ನು ಅಂತಿಮಗೊಳಿಸಿ ಚೀನಾಗೆ ಕಳುಹಿಸಲಾಯಿತು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Statue – Equality -built – Hyderabad-China.