ಬೆಂಗಳೂರು, ಆ. 2,2019(www.justkannada.in): ಅಸಹಜ ಸಾವನ್ನಪ್ಪಿರುವ ಉದ್ಯಮಿ ಸಿದ್ಧಾರ್ಥ್ ಹಾಗೂ ತಮ್ಮ ನಡುವಣ ಸಂಬಂಧದ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳನ್ನು ಹರಿಯಬಿಡುತ್ತಿರುವ ಬಗ್ಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸತ್ತಿರುವ ಸಿದ್ಧಾರ್ಥ್ ಅವರನ್ನು ಸುಳ್ಳು ಸುದ್ದಿಗಳ ಸೃಷ್ಟಿ ಮೂಲಕ ಮತ್ತೆ ಮತ್ತೆ ಚುಚ್ಚಿ, ಚುಚ್ಚಿ ಸಾಯಿಸಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಮತ್ತು ಸಿದ್ಧಾರ್ಥ್ ನಡುವೆ ಸುಮಾರು 30 ವರ್ಷಗಳಿಂದಲೂ ಸ್ನೇಹವಿದೆ. ಸ್ನೇಹ ಮೀರಿದ ಬಾಂಧವ್ಯ ಇದೆ. ಈ ಬಾಂಧವ್ಯದ ಆಳ-ಅಗಲ ತಮ್ಮಿಬ್ಬರಿಗೂ ಮಾತ್ರ ಗೊತ್ತು. ಅದು ಅವರು ಅಮರರಾದ ನಂತರವೂ ಚಿರವಾಗಿರುತ್ತದೆ. ಇದನ್ನು ಅರಿಯದ ಕೆಲವರು ಇಲ್ಲ-ಸಲ್ಲದ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಬದುಕಿದ್ದಾಗ ಸಿದ್ಧಾರ್ಥ್ ಹಾಗೂ ಅವರ ಉದ್ಯಮ ವ್ಯವಹಾರ-ವಹಿವಾಟಿನ ಬಗ್ಗೆ ಏನಾದರೂ ಹೇಳಿದ್ದರೆ ಅವರಿಗೆ ಸ್ಪಷ್ಟನೆ ನೀಡಲು ಅವಕಾಶವಿತ್ತು. ಆದರೆ ಅವರು ಗತಿಸಿದ ನಂತರ ಮನಬಂದಂತೆ ಸುದ್ದಿಗಳನ್ನು ಸೃಜಿಸಿದರೆ, ವ್ಯಾಖ್ಯಾನ-ವಿಶ್ಲೇಷಣೆ ಮಾಡಿದರೆ ಅದಕ್ಕೆ ಉತ್ತರ ನೀಡುವವರು ಯಾರು? ಸ್ಪಷ್ಟನೆ ನೀಡುವವರು ಯಾರು? ಉತ್ತರ ನೀಡಲು ಅವಕಾಶ ಇಲ್ಲದವರ ಬಗ್ಗೆ ಸಲ್ಲದ ಸುದ್ದಿಗಳನ್ನು ಹಬ್ಬಿಸುವುದು ಥರವಲ್ಲ ಎಂದು ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನೊಬ್ಬ ರಾಜಕಾರಣಿ ಮತ್ತು ಉದ್ಯಮಿ. ಅದೇ ರೀತಿ ಸಿದ್ಧಾರ್ಥ್ ಅವರೊಬ್ಬ ಉದ್ಯಮಿ. ರಾಜಕಾರಣ ಮತ್ತು ವ್ಯವಹಾರ ಮಾಡಲು ನನಗೆ ಹಕ್ಕುಗಳಿವೆ. ಅದೇ ರೀತಿ ಸಿದ್ಧಾರ್ಥ್ ಅವರಿಗೂ ಉದ್ಯಮ ನಡೆಸಲು ಹಕ್ಕುಗಳಿವೆ. ಅವರ ಹಕ್ಕೇ ಬೇರೆ. ನನ್ನ ಹಕ್ಕೇ ಬೇರೆ. ತಮ್ಮಿಬ್ಬರ ನಡುವೆ ಸಣ್ಣ-ಪುಟ್ಟ ವ್ಯವಹಾರ ಇದ್ದದ್ದು ನಿಜ. ಆದರೆ ಅ ವ್ಯವಹಾರವನ್ನು ಸಿದ್ಧಾರ್ಥ್ ಅವರ ಸಾವಿನ ಜತೆ ತಳಕು ಹಾಕುವುದು ಸರಿಯಲ್ಲ. ಸಿದ್ಧಾರ್ಥ್ ಸಾವಿನ ಹಿನ್ನೆಲೆಯಲ್ಲಿ ಉದ್ಯಮಿಗಳಾದ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜೂಂದಾರ್ ಷಾ ಅವರು ನೀಡಿರುವ ಹೇಳಿಕೆಗಳ ಬಗ್ಗೆ ಸಿದ್ಧಾರ್ಥ್ ಅವರನ್ನು ಮತ್ತೊಮ್ಮೆ ಕೊಲ್ಲುತ್ತಿರುವವರು ಗಮನ ಹರಿಸಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ವ್ಯವಸ್ಥೆಯ ಹತಾಶೆ ಸಿದ್ಧಾರ್ಥ್ ಅವರನ್ನು ಸಾವಿನ ಕೂಪಕ್ಕೆ ದೂಡಿದೆ. ಇದರಿಂದ ಅವರು ಕುಟುಂಬ ವರ್ಗವದವರು, ಬಂಧುಗಳು, ಅಭಿಮಾನಿಗಳು, ಅವರ ಉದ್ಯಮ ಅವಲಂಬಿಸಿರುವ ನೌಕರ ವರ್ಗಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಬಹಳ ದುಃಖವಾಗಿದೆ. ಕೆಫೆ ಕಾಫಿ ಡೇ ಮೂಲಕ ಕರ್ನಾಟಕದ ಹೆಸರನ್ನು ವಿಶ್ವ ಭೂಪಟದಲ್ಲಿ ಅಚ್ಚೂರುವಂತೆ ಮಾಡಿದ ಸಿದ್ಧಾರ್ಥ್ ಈ ದೇಶದ ಹೆಮ್ಮೆ, ಈ ನಾಡಿನ ಆಸ್ತಿ. ಅವರ ಬಗ್ಗೆ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಅವರ ಸತ್ತ ನಂತರ ಹಬ್ಬಿಸುವುದು ಅವರ ಆತ್ಮಕ್ಕೆ ನೋವು ಹಾಗೂ ಆತ್ಮಗೌರವಕ್ಕೆ ಚ್ಯುತಿ ತರುತ್ತದೆ. ಆ ಕೆಲಸವನ್ನು ಯಾರೂ ಮಾಡುವುದು ಬೇಡ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿದ್ಧಾರ್ಥ್ ಯಾಕಾಗಿ ಸತ್ತರು, ಅವರನ್ನು ಸಾವಿನ ಕೂಪಕ್ಕೆ ತಳ್ಳಿದವರು ಯಾರು ಎಂಬುದರ ಬಗ್ಗೆ ಮೋಹನ್ ದಾಸ್ ಪೈ, ಕಿರಣ್ ಮಜೂಂದಾರ್ ಷಾ ಅವರು ಬೆಳಕು ಚೆಲ್ಲಿದ್ದಾರೆ. ಆದರೂ ಸಿದ್ಧಾರ್ಥ್ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ ಯಾರು ಯಾರಿಗೆ ಬೇಕಾದರೂ ಸುಳ್ಳು ಹೇಳಬಹುದು, ಮೋಸ ಮಾಡಬಹುದು. ಆದರೆ ಆ ದೇವರಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ಆ ಭಗವಂತನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Key words: Siddharth- rumoured- about- their relationship-Former minister- DK Shivakumar