ಬೆಳಗಾವಿ,ಆ,3,2019(www.justkannada.in): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳು ಹಾಗೂ ಬೆಳಗಾವಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಈ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದ್ದು ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಸದ್ಯ ಕೃಷ್ಣಾ ನದಿಯಲ್ಲಿ 2 ಲಕ್ಷ 20 ಸಾವಿರ ಕ್ಯೂಸೆಕ್ಸ್ ಹರಿವಿದ್ದು ಇಂದು ಮಹಾರಾಷ್ಟ್ರದ ಕೊಯ್ನಾ ಡ್ಯಾಂ ನಿಂದ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಈ ಕುರಿತು ರಾಜ್ಯಕ್ಕೆ ಮಹಾರಾಷ್ಟ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೃಷ್ಣಾ ನದಿಗೆ ನೀರಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಚಿಕ್ಕೋಡಿ, ರಾಯಬಾಗ,ಅಥಣಿ ಭಾಗದ 39 ಕ್ಕೂ ಹೆಚ್ಚು ಗ್ರಾಮಗಳಿಗೆ ಮುಳುಗಡೆ ಭೀತಿಯಲ್ಲಿವೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಬೆಳಗಾವಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಸೂಚನೆ ನೀಡಿದೆ.
ಭಾರಿ ಮಳೆಯಿಂದಾಗಿ 10ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ ಗೊಂಡಿದ್ದು 20 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಬೆಳಗಾವಿ, ಖಾನಾಪೂರ ಸೇರಿದಂತೆ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಬೆಳಗಾವಿ ನಗರದ ಕೆಲ ಬಡಾವಣೆಗಳು ನಡುಗಡ್ಡೆಯಂತಾಗಿವೆ.
ಬೆಳಗಾವಿ ನಗರದ ಹೊರವಲಯದಲ್ಲಿರುವ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿರುವ ಪರಿಣಾಮ ಬೆಳಗಾವಿಯ ಸಮರ್ಥ ನಗರ, ವಡಗಾವಿ ಸೇರಿದಂತೆ ಕೆಲ ಪ್ರದೇಶಗಳು ನಡುಗಡ್ಡೆಯಂತಾಗಿವೆ.
ದಂಪತಿ ರಕ್ಷಣೆ….
ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಹಿನ್ನೆಲೆ. ನಡುಗಡ್ಡೆಯಲ್ಲಿ ಸಿಲುಕಿದ್ದ ದಂಪತಿಗಳನ್ನು ಎಸ್ ಡಿ ಆರ್ ಎಫ್ ತಂಡ ರಕ್ಷಿಸಿದೆ. ರಾಯಭಾಗ ತಾಲೂಕಿನ ಶಿರಗೂರ ಗ್ರಾಮದಲ್ಲಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೀರಾಸಾಬ್ ಮುಲ್ಲಾ ದಂಪತಿ ಸೇರಿ ಮಕ್ಕಳು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ. ನಿನ್ನೆ ರಾತ್ರಿಯಿಂದ ಮುಲ್ಲಾ ಕುಟುಂಬ ಹೊರಬರದ ಸ್ಥಿತಿಯಲ್ಲಿತ್ತು. ರಾತ್ರಿ ಏಕಾಏಕಿ ನದಿ ನೀರು ಹೆಚ್ಚಾಗಿದ್ದರಿಂದ ಹೊರಬರಲು ಸಾಧ್ಯವಾಗದ ಕಷ್ಟಪಡುತ್ತಿದ್ದರು.
ಮಹಾರಾಷ್ಟ್ರದ ಅಧಿಕ ಮಳೆಯಿಂದಾಗಿ ರಾಯಚೂರಿಗೂ ಇದರ ಬಿಸಿ ತಟ್ಟಿದೆ. ನಾರಾಯಣಪುರ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನ ನದಿಗೆ ಬಿಡಲಾಗಿದೆ. ಜಲಾಶಯದ 20 ಗೇಟುಗಳಿಂದ 2.30 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದ್ದು. ಇದರಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಜತೆಗೆ ಶೀಲಹಳ್ಳಿ ಸೇತುವೆ ಹೂವಿನಹೆಡಗಿ ಸೇತುವೆ ಮುಳಗಡೆಯಾಗಿದ್ದು ದೇವದುರ್ಗಾ ಕಲಬರುಗಿ ಸಂಚಾರ ಸ್ಥಗಿತಗೊಂಡಿದೆ. ಮಳೆಯ ಪರಿಣಾಮದಿಂದಾಗಿ ಕಾಡ್ಲೂರಿನ ಉಪೇಂದ್ರ ತೀರ್ಥ ಕಾರಾರ್ಚಿತ ದೇವಸ್ಥಾನಕ್ಕೆ ನೀರು ನುಗ್ಗಿದ್ದು ಗುರ್ಜಾಪುರ ಬ್ರೀಜ್ ಕಂ ಬ್ಯಾರೇಜ್ ಮುಳುಗುವ ಹಂತ ತಲುಪಿದೆ. ಹೀಗಾಗಿ ನದಿ ಪಾತ್ರದಲ್ಲಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಿದೆ.
ಕೃಷ್ಣಾ ನದಿ ನೀರು ಹರಿವು ಹೆಚ್ಚಿದ ಹಿನ್ನೆಲೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದ್ದು ತೋಟದ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಮುತ್ತೂರು ತೋಟದ ವಸತಿ ಕುಟುಂಬಗಳನ್ನ ಗಂಟು ಮೂಟೆ ಕಟ್ಟಿಕೊಂಡು ಬೋಟ್ ಮೂಲಕ ಸುರಕ್ಷತಾ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಒಟ್ಟಾರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೆಳಗಾವಿಯಲ್ಲಿ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಜನ ಜೀವನ ಅಸ್ತವ್ಯಸ್ತವಾದಂತಾಗಿದೆ.
Key words: Krishna river – rain-Maharashtra – Belgavi