ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ‘ಗ್ರೀನ್ ಲೈಬ್ರರಿ’

ಬೆಂಗಳೂರು, ಫೆಬ್ರವರಿ 21, 2022 (www.justkannada.in): ಕೋವಿಡ್ ಸಾಂಕ್ರಾಮಿಕದಿಂದಾಗಿ ಎದುರಾಗಿರುವ ವಿವಿಧ ಸವಾಲುಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ‘ಗ್ರೀನ್ ಲೈಬ್ರರಿ’ (ನಿಸರ್ಗ ಗ್ರಂಥಾಲಯ) ಎಂಬ ವಿಶೇಷ ಪರಿಕಲ್ಪನೆಯನ್ನು ರೂಪಿಸಿದೆ.

ಹೊಸ ಸಹಜಸ್ಥಿತಿಯ ಅಳವಡಿಕೆ ಮತ್ತು ಗ್ರಂಥಾಲಯದ ಕಡೆಗೆ ಹೆಚ್ಚು ಓದುಗರನ್ನು ಆಕರ್ಷಿಸುವುದು ಈ ಪರಿಕಲ್ಪನೆಯ ಮುಖ್ಯ ಗುರಿಯಾಗಿದೆ. ಸುಮಾರು 10 ಎಕರೆಗಳ ವ್ಯಾಪ್ತಿಯಲ್ಲಿ ಹರಡಿರುವ ಆವರಣದ ಒಳಗಿನ ದಟ್ಟವಾದ ಹಸಿರು ನಿಸರ್ಗದ ನಡುವೆ ಈ ನೂತನ ಗ್ರಂಥಾಲಯವನ್ನು ಸೇರಿಸಲು ವಿಶ್ವವಿದ್ಯಾಲಯ ಯೋಜಿಸಿದೆ. ಅಂದಾಜು ರೂ.೧.೫ ಕೋಟಿ ಮೊತ್ತದ ಈ ಯೋಜನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದೊಳಗೆ ವಿವಿಧ ಹಂತಗಳಲ್ಲಿ ರೂಪುಗೊಳ್ಳಲು ಆರಂಭಿಸಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಮಿಯಾವಕಿ ಪದ್ಧತಿಯನ್ನು ಬಳಸಿ ಒಂದು ದಟ್ಟವಾದ ಅಡವಿಯನ್ನು ನಿರ್ಮಿಸಿ, ಗ್ರಂಥಾಲಯದ ಸುತ್ತಲೂ ಸುಗಂಧ ಪರಿಮಳ ಸೂಸುವ ಹೂವುಗಳಿಂದ ಕೂಡಿರುವ ಮರಗಳ ಜೊತೆಗೆ ಸುಮಾರು ೧೦,೦೦೦ ಸ್ಥಳೀಯ ತಳಿಗಳ ಗಿಡ, ಮರಗಳನ್ನು ನೆಡಲಾಯಿತು.

ಈ ಕುರಿತು ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್. ಅವರು, “ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯಗಳೇ ವಿದ್ಯಾರ್ಥಿಗಳ ಬಹುಮುಖ್ಯವಾದ ಸ್ಥಳ. ಕೋವಿಡ್ ಸಾಂಕ್ರಾಮಿಕದ ಸವಾಲುಗಳಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದರ ಜೊತೆಗೆ ಗ್ರಂಥಾಲಯವನ್ನು ಹೆಚ್ಚು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗಿತ್ತು. ಹಾಗಾಗಿ, ನಿಸರ್ಗದ ನಡುವೆ ಗ್ರಂಥಾಲಯದ ಪರಿಕಲ್ಪನೆಯನ್ನು ರೂಪಿಸಲಾಯಿತು. ಈ ಯೋಜನೆಯ ಅನುಷ್ಠಾನದ ಒಂದು ಭಾಗ ಈಗಾಗಲೇ ಕಾರ್ಯರೂಪದಲ್ಲಿದ್ದು, ಇತರೆ ಯೋಜನೆಗಳನ್ನು ಸದ್ಯದಲ್ಲೇ ಅನುಮೋದಿಸಲಾಗುವುದು,” ಎಂದು ವಿವರಿಸಿದರು.

ಈ ಯೋಜನೆಯ ಭಾಗವಾಗಿ, ವಿದ್ಯಾರ್ಥಿಗಳು ನಿಸರ್ಗದ ನಡುವೆ ಕುಳಿತು ಪುಸ್ತಕಗಳನ್ನು ಓದಲು ಅನುಕೂಲವಾಗುವ ಹಾಗೆ ಗ್ರಂಥಾಲಯದ ಸುತ್ತಲಿನ ೧೦ ಎಕರೆಗಳ ವ್ಯಾಪ್ತಿಯೊಳಗಿರುವ ಬಹಳ ಹಳೆಯ ಅರಳಿ ಮರಗಳ ನಡುವೆ ನಾಲ್ಕು ಪರ್ಗೊಗಲಾಸ್ (ಬಳ್ಳಿಗಳು ಹಬ್ಬಿರುವ ಕಮಾನುಗಳು) ಹಾಗೂ ಹಲವು ಕೂರುವ ಬೆಂಚುಗಳನ್ನು ಸೃಷ್ಟಿಸಲು ಬೆಂಗಳೂರು ವಿಶ್ವವಿದ್ಯಾಲಯ ಯೋಜಿಸಿದೆ.

ವಿಶ್ವವಿದ್ಯಾಲಯದ ಗ್ರಂಥಾಲಯದ ಪಾಲಕರಾದ ಡಾ. ಬಿ.ಆರ್. ರಾಧಾಕೃಷ್ಣನ್ ಅವರು ಈ ಕುರಿತು ಮಾತನಾಡಿ, “ವಿದ್ಯಾರ್ಥಿಗಳು ಒಂದು ಕ್ಯೂಬಿಕಲ್ ಒಳಗೆ ಅಥವಾ ಸುತ್ತಲೂ ಮುಚ್ಚಿರುವಂತಿರುವ ಪರಿಸರದ ನಡುವೆ ಕುಳಿತು ಓದಬೇಕು. ಅವರು ಶೆಲ್ಫ್ ನಲ್ಲಿರುವ ಯಾವುದಾದರೂ ಪುಸ್ತಕವನ್ನು ತೆಗೆದುಕೊಂಡು ಉದ್ಯಾನವನದಲ್ಲಿ ಕುಳಿತು ಆರಾಮವಾಗಿ ಓದಬಹುದು. ಈ ಹಸಿರು ಗ್ರಂಥಾಲಯ ೬೨,೦೦೦ ಇ-ಪುಸ್ತಕಗಳ ಬೃಹತ್ ಡಿಜಿಟಲ್ ಸಂಪರ್ಕದೊಂದಿಗೆ ಸಂಪರ್ಕವನ್ನೂ ಹೊಂದಿದೆ. ಶಿಕ್ಷಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾದ ಚರ್ಚೆಗಳನ್ನು ನಡೆಸಲು ಮತ್ತು ಶೈಕ್ಷಣಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸಮಾಲೋಚನೆಗಳನ್ನು ನಡೆಸಲು ಅನುಕೂಲವಾಗುವಂತೆ ಚಿಕ್ಕ ತೆರೆದ ಕಾಟೇಜ್ ರೂಪದ ಕಟ್ಟಡವನ್ನು ನಿರ್ಮಿಸಿಲಾಗುವುದು,” ಎಂದು ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಗ್ರಂಥಾಲಯಗಳನ್ನು ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವ ಡಿಜಿಟಲ್ ಅವತಾರದಲ್ಲಿ ರೂಪಿಸಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ ೧೦-ಎಕರೆ ಉದ್ಯಾನದ ಒಳಗಿರುವ ಹಳೆಯ ಕ್ಯಾಂಟೀನ್ ಕಟ್ಟಡವನ್ನು ಭಾಷಾ ಪ್ರಯೋಗಾಲಯ ಹಾಗೂ ಮಾಹಿತಿ ಸಂಪನ್ಮೂಲ ಕೇಂದ್ರವನ್ನಾಗಿ (ಸಿಐಆರ್‌ಸಿ) ಪರಿವರ್ತಿಸುವ ಆಲೋಚನೆಯನ್ನೂ ಮಾಡಿದೆ. “ಬೆಂಗಳೂರು ದಕ್ಷಿಣ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಕೇಂದ್ರ ಸ್ಥಾನವಾಗಿ ರೂಪುಗೊಂಡಿದೆ. ನಮ್ಮ ಸಿಐಆರ್‌ಸಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವಂತಹ ಎಲ್ಲಾ ಸಂಪನ್ಮುಲಗಳು ಹಾಗೂ ಮಾರ್ಗದರ್ಶನವನ್ನು ಒಂದೇ ಸೂರಿನಡಿ ಕಲ್ಪಿಸಲಿದೆ,” ಎಂದು ಅಭಿಪ್ರಾಯಪಟ್ಟರು.

ಒಂದು ಬಾರಿ ೨೦೦-೩೦೦ ಜನರು ಕುಳಿತುಕೊಳ್ಳುವ ಸಾಮರ್ಥ್ಯವುಳ್ಳ ಒಂದು ತೆರೆದ ಆಂಪಿಥಿಯೇಟರ್ ಅನ್ನು ನಿರ್ಮಿಸಲಾಗುತ್ತಿದ್ದು, ಇದು ಶೈಕ್ಷಣಿಕ ವಿಚಾರಗೋಷ್ಠಿಗಳು ಹಾಗೂ ಪ್ರೆಸೆಂಟೇಷನ್‌ಗಳಿಗೆ ಅನುಕೂಲ ಮಾಡಿಕೊಡಲಿದೆ.

“ಅತೀ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುವ, ವಿವಿಧ ನಿಯತಕಾಲಿಕೆಗಳು, ಮಾಗ್ಯಜಿನ್‌ ಗಳು ಹಾಗೂ ಸುದ್ದಿಪತ್ರಿಕೆಗಳ ವಿಭಾಗವನ್ನೂ ಸಹ ಈ ನೈಸರ್ಗಿಕ ಗ್ರಂಥಾಲಯದ ಆವರಣದೊಳಗೆ ಸೇರ್ಪಡೆಗೊಳಿಸಲಾಗುವುದು. ಈಗಾಗಲೇ ಈ ಹಸಿರು ಗ್ರಂಥಾಲಯಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ವಿದ್ಯಾರ್ಥಿಗಳು ಮರಗಳ ಕೆಳಗೆ ಕುಳಿತು ಓದಲಾರಂಭಿಸಿದ್ದಾರೆ,” ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಪಾಲಯ ಅಧಿಕಾರಿಯೊಬ್ಬರು ತಿಳಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  Green Library – campus – Bangalore University