ಮೈಸೂರು,,ಫೆಬ್ರವರಿ,21,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿಥಿಲಗೊಂಡು ದುಸ್ಥಿತಿಗೆ ಒಳಗಾಗಿರುವ ಪಾರಂಪರಿಕ ಕಟ್ಟಡಗಳ ಪಾಲಿಗೆ ಇದೀಗ ರಂಗಾಚಾರ್ಯಲು ಪುರಭವನ ಸೇರ್ಪಡೆಗೊಳ್ಳುತ್ತಿದೆ.
ಹೌದು, ನಿರ್ವಹಣೆಯ ಕೊರತೆಯಿಂದಾಗಿ ರಂಗಾಚಾರ್ಯಲು ಪುರಭವನ ಶಿಥಿಲಗೊಳ್ಳುತ್ತಿದೆ. ದುರಸ್ಥಿಗೆ ನ್ಯಾಯಾಲಯದಲ್ಲಿ ಪ್ರಕರಣದ ಅಡ್ಡಿಯಿಂದಾಗಿ ಮೈಸೂರು ಮಹಾನಗರ ಪಾಲಿಕೆ ಕೈಕಟ್ಟಿ ಕೂರಬೇಕಾದ ಸ್ಥಿತಿ ಎದುರಾಗಿದೆ.
ಪುರಭವನದ ಕಟ್ಟಡದ ಮೇಲ್ಚಾವಣಿಯಿಂದ ಮಳೆ ನೀರು ಸೋರಲಾರಂಭಿಸಿದ್ದು, ಕಟ್ಟಡದ ಗೋಡೆ ದುರ್ಬಲಗೊಳ್ಳುತ್ತಿದೆ. ಇದರಿಂದ ಮೇಲ್ಚಾವಣಿಯಿಂದ ಗಾರೆ ಚಕ್ಕೆ ಕುಸಿಯುತ್ತಿದೆ. ಮೇಲ್ಚಾವಣಿ ಪೂರ್ಣ ಪ್ರಮಾಣದಲ್ಲಿ ಕುಸಿಯಬಹುದೆಂಬ ಆತಂಕದಿಂದ ಕಬ್ಬಿಣದ ಸಲಾಕೆಗಳಿಂದ ಸೆಂಟ್ರಿಂಗ್ ಕಟ್ಟಿ ತಾತ್ಕಾಲಿಕ ಭದ್ರತೆ ಒದಗಿಸಲಾಗಿದೆ. ಇದರಿಂದ ಕಬ್ಬಿಣದ ಸಲಾಕೆಗಳೇ ಮೇಲ್ಚಾವಣಿಯ ಬಾರ ಹೊರುತ್ತಿವೆ.
ಇನ್ನು ಮೇಲ್ಚಾವಣಿಗೆ ಕೆಲವೆಡೆ ಬಳಸಲಾದ ಮರ, ಬಾಗಿಲು, ಕಿಟಕಿ ಬಾಗಿಲುಗಳ ವಾಸ್ಕಾಲ್ ಗಳು ಗೆದ್ದಲು ಪಾಲಾಗುತ್ತಿವೆ. ಇದರಿಂದ ಕಿಟಿಕಿ ಹಾಗೂ ಬಾಗಿಲುಗಳು ಮುರಿದು ಬೀಳುವಂತಾಗಿದೆ. ಪುರಭವನದ ವೇದಿಕೆಗೆ ಹೊಂದಿಕೊಂಡಂತೆ ಬಲಬದಿಯಲ್ಲಿರುವ ಬಾಗಿಲುಗಳೇ ಗೆದ್ದಲು ಹುಳುಗಳ ಪಾಲಾಗುತ್ತಿದೆ.
ಮೈಸೂರು ಸಂಸ್ಥಾನದಲ್ಲಿ 1881 ರಿಂದ 1902ನೇ ಅರಸರಾಗಿ ಆಳ್ವಿಕೆ ನಡೆಸಿದ ಚಾಮರಾಜ ಒಡೆಯರ್ ಅವರ ಅಧಿಕಾರಾವಧಿಯಲ್ಲಿ ಮೈಸೂರಲ್ಲಿ ಪುರಭವನವನ್ನು ನಿರ್ಮಿಸಲಾಗಿದೆ. ಮೈಸೂರು ಸಂಸ್ಥಾನ ಮೊದಲ ದೀವಾನರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಸಿ.ವಿ.ರಂಗಾಚಾರ್ಯಲು ಅವರ ಸ್ಮರಣಾರ್ಥ ಪುರಭವನದ ಕಟ್ಟಡವನ್ನು ನಿರ್ಮಿಸಲಾಗಿತ್ತು. 138 ವರ್ಷ ಸಂದಿರುವ ಪುರಭವನದ ಕಟ್ಟಡ ಶಿಥಿಲಾವಸ್ಥೆಗೆ ಜಾರಿರುವುದು ಮೈಸೂರು ನಗರದ ಪಾರಂಪರಿ ಕಥೆಗೆ ದೊಡ್ಡ ಮಟ್ಟದ ನಷ್ಟವಾಗಿದೆ.
ಮೈಸೂರಿನ ಪುರಭವನದ ಕಟ್ಟಡಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದ ಮೈಸೂರು ಮಹಾನಗರ ಪಾಲಿಕೆ ಅದಕ್ಕಾಗಿ ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಇದರೊಂದಿಗೆ ಪುರಭವನದ ಆವರಣದಲ್ಲಿ 18.28 ಕೋಟಿ ರೂ ವೆಚ್ಚದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. 2011ರ ಎಪ್ರಿಲ್ 29ರಂದು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಹಾಗೂ ಪುರಭವನದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು.
ನಿಯಮಾನುಸಾರ ಈ ಕಟ್ಟಡವನ್ನು 2012ರ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ನಿಗಧಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆ ಹೆಚ್ಚುವರಿ ಅನುಧಾನ ನೀಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪಾಲಿಕೆ ಒಪ್ಪದ ಕಾರಣ, ಗುತ್ತಿಗೆ ಪಡೆದಿದ್ದ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆ ಸಂಸ್ಥೆಗೆ ಎರಡು ಪ್ರಕರಣ ಹೂಡಿತ್ತು. ಅದರಲ್ಲಿ ಒಂದು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡಕ್ಕೆ ಸಂಬಂಧಿಸಿದ್ದಾಗಿದ್ದರೆ, ಮತ್ತೊಂದು ಪುರಭವನದ ಕಟ್ಟಡಕ್ಕೆ ಸಂಬಂಧಿಸಿದ್ದಾಗಿತ್ತು. ಈ ಪ್ರಕರಣಗಳಿಂದಲೇ ಪುರಭವನದ ಕಟ್ಟಡ ದುಸ್ಥಿತಿಗೆ ದೂಡಲು ಕಾರಣವಾಗಿದೆ.
ಪುರಭವನದ ಕಟ್ಟಡವನ್ನು ದುರಸ್ಥಿ ಮಾಡುವುದಕ್ಕೆ ಇನ್ನು ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದಲ್ಲಿ ಪುರಭವನದ ಕಟ್ಟಡಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥವಾಗಿದೆಯೇ ಅಥವಾ ಇನ್ನು ವಿಚಾರಣೆ ಹಂತದಲ್ಲಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಕಟ್ಟಡದ ದುರಸ್ಥಿಗಾಗಿ ಶೀಘ್ರವೇ ಅಂದಾಜು ಪಟ್ಟಿ ತಯಾರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಭವನದ ಸಮಿತಿ ಅಧ್ಯಕ್ಷ, ಪಾಲಿಕೆ ಸದಸ್ಯ ರಮೇಶ್, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲು ದುರಸ್ಥಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದಿದ್ದಾರೆ. ಹೀಗಾಗಿ ಕಟ್ಟಡದ ದುರಸ್ಥಿಗೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ಸ್ಪಷ್ಟತೆ ಇಲ್ಲದಂತೆ ಕಾಣುತ್ತದೆ ಎನ್ನಲಾಗುತ್ತಿದೆ.
Key words: mysore-Rangacharlu-purabhavan