ಬೆಂಗಳೂರು,ಫೆಬ್ರವರಿ,26,2022(www.justkannada.in): ಪತ್ರಕರ್ತರ ಕಲ್ಯಾಣ ನಿಧಿಗೆ ಕನಿಷ್ಠ 100 ಕೋಟಿ ರೂ ಮೀಸಲಿಡಬೇಕು ಎಂಬ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಬೇಡಿಕೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಬಜೆಟ್ ಪೂರ್ವ ಭಾವಿ ಸಭೆ ಹಿನ್ನೆಲೆಯಲ್ಲಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ್ದ ಪತ್ರಕರ್ತರ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ.
ಕಲಬುರಗಿಯಲ್ಲಿ ನಡೆದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕ್ಷೇಮ ನಿಧಿಗೆ ನೂರು ಕೋಟಿ ಮೀಸಲಿಡುವಂತೆ ನಿರ್ಣಯ ತೆಗೆದುಕೊಂಡಿದ್ದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಅದಕ್ಕೆ ಅವರು ಸಕಾರಾತ್ಮಕ ಸ್ಪಂಧನೆ ನೀಡಿದ್ದಾರೆ.
ಉಚಿತ ಹೆಲ್ತ್ ಕಾರ್ಡ್ ಯೋಜನೆಯನ್ನು ಗ್ರಾಮೀಣ ಮಟ್ಟದಲ್ಲಿರುವ ಎಲ್ಲಾ ಪತ್ರಕರ್ತರಿಗೂ ವಿಸ್ತರಣೆ ಮಾಡಬೇಕು ಮತ್ತು ಉಚಿತ ಬಸ್ ಪಾಸ್ ಸೌಲಭ್ಯ ನೀಡಬೇಕೆಂದು ಮನವಿ ಮಾಡಲಾಗಿದೆ. ಖ್ಯಾತ ಪತ್ರಕರ್ತ ಪಾಟೀಲ್ ಪುಟ್ಟಪ್ಪ (ಪಾಪು), ಮೊಹರೆ ಹಣಮಂತರಾಯ, ಎಚ್.ಎಸ್.ದೊರೆಸ್ವಾಮಿ ಮತ್ತು ರಾಜಶೇಖರ ಕೋಟಿ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತೆ ಮನವಿ ಮಾಡಲಾಗಿದೆ.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಸೇರಿದಂತೆ ತಾರತಮ್ಯ ಮಾಡದೆ ಜಾಹೀರಾತು ನೀಡಲು ಕ್ರಮ ಕೈಗೊಳ್ಳಬೇಕು. ಜಾಹೀರಾತು ನೀತಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ. ಸಂಘದ ಸಂಸ್ಥಾಪಕ ಮತ್ತು ಪತ್ರಕರ್ತ ಡಿ.ವಿ.ಗುಂಡಪ್ಪ ಹೆಸರಿನಲ್ಲಿ ವಾರ್ತಾ ಇಲಾಖೆಯಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಬೇಕು ಎಂದು ವಿನಂತಿಸಲಾಗಿದೆ.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ನ್ಯೂಸ್18 ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಚಿದಾನಂದ ಪಟೇಲ್, ಪಬ್ಲಿಕ್ ಟಿವಿ ಪೊಲಿಟಿಕಲ್ ಮುಖ್ಯಸ್ಥ ಬದ್ರುದ್ದೀನ್, ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಮತ್ತಿತರರು ನಿಯೋಗದಲ್ಲಿದ್ದರು.
Key words: journalists-demand-CM Bommai – KUWJ.