ಬೆಂಗಳೂರು, ಮಾರ್ಚ್ 8,2022(www.justkannada.in): ಸ್ವಸ್ಥ, ಸಮೃದ್ಧ ಕರ್ನಾಟಕದ ಮೂಲಕ ನವ ಭಾರತದ ನಿರ್ಮಾಣವಾಗಬೇಕು. ಮಹಿಳೆಯರಿಗೆ ಆಡಳಿತ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಹೆಚ್ಚಿನ ಸ್ಥಾನಮಾನ ಸಿಕ್ಕಿದಾಗ ಮಾತ್ರ ಮಹಿಳಾ ಸಬಲೀಕರಣವಾಗಿ, ಭಾರತ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಮತ್ತು ಹೈ ರಿಸ್ಕ್ ಪ್ರೆಗ್ನೆನ್ಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚಣೆ ದಿನವೇ ಮಿಲ್ಕ್ ಬ್ಯಾಂಕ್ ಅಮೃತಧಾರೆಗೆ ಚಾಲನೆ ಸಿಕ್ಕಿರುವುದು ಅರ್ಥಪೂರ್ಣ. ತಾಯಿಯ ಎದೆಹಾಲಿಗಿಂತ ಅಮೃತ ಬೇರೆ ಇಲ್ಲ ಎಂದು ಹೇಳಿದರು.
ರಾಜ್ಯದ ಒಟ್ಟು 4 ಕಡೆ ಎದೆ ಹಾಲು ಸಂಗ್ರಹಿಸುವ ಕೇಂದ್ರವಿದೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ವ್ಯವಸ್ಥೆ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿದೆ. ಈ ಮೂಲಕ ಅನೇಕ ಮಕ್ಕಳಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.
ವಾಣಿ ವಿಲಾಸ್ ಆಸ್ಪತ್ರೆಯಲ್ಲಿ 72 ಹಾಸಿಗೆಯುಳ್ಳ ಹೈ ರಿಸ್ಕರ್ ಪ್ರೆಗ್ನೆನ್ಸಿ (HRP) ಕಟ್ಟಡದ ಮಹಡಿಗಳು ಕೂಡ ಉದ್ಘಾಟನೆಯಾಗಿವೆ. ಇದರಲ್ಲಿ 28 ಹಾಸಿಗೆಯ NICU(ನಿಯೋನೇಟಲ್ ಐ.ಸಿ.ಯು), 22 ಹಾಸಿಗೆಯ ಪಿಡಿಯಾಟ್ರಿಕ್ ಐ.ಸಿ.ಯು, 22 ಹಾಸಿಗೆಯ ಎಂ.ಐ.ಸಿ.ಯು. (ಮೆಟರನಲ್ ಐ.ಸಿ.ಯು.) ಇದೆ. ಉನ್ನತ ಉಪಕರಣಗಳು ಕೂಡ ಇಲ್ಲಿವೆ. BMRCL, KHSDP ಹಾಗೂ Bangalore Smart City Project ವಿವಿಧ ರೀತಿಯಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದೆ ಎಂದು ಹೇಳಿದರು.
ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ ನಮ್ಮ ದೇಶ ಜಗತ್ತಿಗೆ ಮಾದರಿ. ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು ಕೂಡ ಸಿಗುತ್ತಿವೆ. ಮಾತೃ ವಂದನಾ, ನಗುಮಗು, ಜನನಿ ಸುರಕ್ಷಾ ಹೀಗೆ ಹಲವು ಯೋಜನೆಗಳ ಮೂಲಕ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ. ಮಕ್ಕಳಿಗೆ ಎದೆಹಾಲು ಉಣಿಸುವುದು ಮುಖ್ಯ. ವಿಶೇಷ ಪ್ರಕರಣಗಳಲ್ಲಿ ಹಾಲು ಉಣಿಸುವ ಶಕ್ತಿ ಕೆಲವರಿಗೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಿಲ್ಕ್ ಬ್ಯಾಂಕ್ ಮೂಲಕ ಸಂಗ್ರಹಣೆಯಾಗುವ ಹಾಲು ಮಕ್ಕಳಿಗೆ ನೆರವಾಗಲಿದೆ ಎಂದರು.
ಮಿಲ್ಕ್ ಬ್ಯಾಂಕ್ ನಲ್ಲಿ ಇಲ್ಲಿ ತನಕ 27 ಲೀಟರ್ ಎದೆಹಾಲು ಸಂಗ್ರಹವಾಗಿದೆ. ಈ ಪೈಕಿ 21 ಲೀಟರ್ ಹಾಲನ್ನು 89 ರಿಂದ 90 ಮಕ್ಕಳಿಗೆ ನೀಡಲಾಗಿದೆ. ರಾಜ್ಯದಲ್ಲಿ ಐಎಂಆರ್ 1000 ಕ್ಕೆ 21 ಇದೆ. ದೇಶದ ಸರಾಸರಿಗಿಂತ ಇದು ಕಡಿಮೆ ಇದೆ. ಎಂಎಂಆರ್ 1 ಲಕ್ಷಕ್ಕೆ 92 ಪ್ರಕರಣ ಇದೆ. ಈ ಸಮಸ್ಯೆಯನ್ನು ಬಗೆಹರಿಸಿ 2030 ರ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಗುರಿಯನ್ನು ತಲುಪಬೇಕಿದೆ ಎಂದರು.
ಬೇರೆ ಇಲಾಖೆಗಳಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಆಡಳಿತದ ಅನುಭವ ಪಡೆದಿರುತ್ತಾರೆ. ಆದರೆ ಆರೋಗ್ಯ ಇಲಾಖೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರೇ ಇರುತ್ತಾರೆ. ಇವರಿಗೆ ಆಡಳಿತದ ತರಬೇತಿ ನೀಡುವ ಕೆಲಸವಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಲಸಿಕೆಯನ್ನು ವೇಗವಾಗಿ ನೀಡಲಾಗಿದೆ. ವೈದ್ಯರು ಮನೆಮನೆಗೂ ಹೋಗಿ ಲಸಿಕೆ ನೀಡಿದ್ದಾರೆ. ಕೋವಿಡ್ ನಂತರದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಟ್ಟಿದೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರ ಸೇವೆ ಮರೆಯಲು ಸಾಧ್ಯವಿಲ್ಲ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಮನೆ ಮನೆಗೆ ಹೋಗಿ ಆರೈಕೆ ಮಾಡಿ, ಮಾರ್ಗದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಸರ್ಕಾರ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಳ ಮಾಡಿದೆ. ಸಮರ್ಥ ಭಾರತದ ನಿರ್ಮಾಣವಾಗಬೇಕು. ಅದಕ್ಕೆ ಸಮೃದ್ಧ, ಹಾಗೂ ಸ್ವಸ್ಥ ಕರ್ನಾಟಕದ ಮೂಲಕ ನವಭಾರತ ನಿರ್ಮಾಣವಾಗಬೇಕು ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
Key words: International Women’s Day- Minister -Dr. K. Sudhakar