ಬೆಂಗಳೂರು,ಮಾರ್ಚ್,10,2022(www.justkannada.in): ಮೈಸೂರಿನಲ್ಲಿ ಡಿ.ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಕಾರ್ಯ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮೈಸೂರಿನ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ನಿಯೋಗವು ಮನವಿ ಸಲ್ಲಿಸಿತು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಹಿಂದುಳಿದ ವರ್ಗಗಳ ಹರಿಕಾರ. ಮಾಜಿ ಸಿಎಂ ದಿ. ಡಿ.ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಕೋರಿ ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡ್ಡಿಯೂರಪ್ಪ ಅವರಿಗೆ ಅವರ ಅಧಿಕಾರಾವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಆರ್.ರಘು ಕೌಟಿಲ್ಯ ಅವರ ನೇತೃತ್ವದಲ್ಲಿ ನಿಯೋಗವು ಮನವಿ ಮಾಡಿತ್ತು.
,ಮನವಿಗೆ ಸ್ಪಂದಿಸಿದ ಬಿಎಸ್ ವೈ ಮೈಸೂರು ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾ ಮಟ್ಟದ ಕಛೇರಿ ಸಂಕೀರ್ಣ ಮುಂಭಾಗದಲ್ಲಿ ಡಿ.ದೇವರಾಜ ಅರಸು ಅವರ ಪ್ರತಿಮೆ ಪ್ರತಿಷ್ಠಾಪನೆ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಾರ್ಯಲಯದಿಂದ ಸೂಚನೆ ನೀಡಿತ್ತು .
ಅದರಂತೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ,ಜಿಲ್ಲಾಧಿಕಾರಿಗಳು ಹಾಗೂ ಸಂಸದರಾದ ಪ್ರತಾಪ್ ಸಿಂಹ ಅವರು ಸ್ಥಳ ಪರಿಶೀಲಿಸಿ ಪ್ರತಿಮೆ ನಿರ್ಮಾಣ ಮಾಡಲು ಸೂಕ್ತ ಸ್ಥಳವೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಕಾರ್ಯಪಾಲಕ ಅಭಿಯಂತರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಮೈಸೂರು ಅವರಿಂದ ದಿ. ಡಿ.ದೇವರಾಜ ಅರಸು ಅವರ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ನಕ್ಷೆ ಹಾಗೂ ಅಂದಾಜು ವೆಚ್ಚ ಪಡೆದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಿದ್ದಾರೆ.
ಪ್ರತಿಮೆ ಪ್ರತಿಷ್ಠಾಪನೆಗೆ ರೂ.92 ಲಕ್ಷಗಳನ್ನು ಪ್ರತ್ಯೇಕವಾಗಿ ಲೆಕ್ಕ ಶೀರ್ಷಿಕೆ 4225-03-283-0-1 ಆಬ್ಜೆಕ್ಟೀವ್ ಕೋಡ್ 386 ರಡಿಯಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸಿ ಬಿಡುಗಡೆ ಮಾಡಲು ಕೋರಿ ಪ್ರಸ್ತಾವನೆ ಸಲ್ಲಿಸಿದೆ . ಆದುದರಿಂದ ತಾವು ಡಿ.ದೇವರಾಜ ಅರಸು ಪ್ರತಿಮೆ ನಿರ್ಮಾಣ ಕಾರ್ಯವನ್ನು ಕೂಡಲೇ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್,ವಿಶ್ವನಾಥ್, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಸಮಿತಿಯ ಗೌರವ ಸಲಹೆಗಾರರಾದ ಡಾ.ವೈ.ಡಿ.ರಾಜಣ್ಣ, ಸಮಿತಿಯ ರಾಜ್ಯ ಸಂಚಾಲಕ ಡೈರಿ ವೆಂಕಟೇಶ್ ಉಪಸ್ಥಿತರಿದ್ದರು.
Key words: mysore-statue – D. Devaraja arasu